ನಮ್ಮ ಪಕ್ಷದಿಂದಾಗಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ತೊರೆಯುತ್ತಿದ್ದಾರೆ ಎಂದ ಸಿಪಿಎಂ ನಾಯಕ!
ಸಾಂದರ್ಭಿಕ ಚಿತ್ರ (PTI)
ತಿರುವನಂತಪುರಂ: ಕೇರಳದ ಮುಸ್ಲಿಂ ಬಾಹುಳ್ಯದ ಮಲಪ್ಪುರಂ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವದಿಂದ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ತ್ಯಜಿಸಲು ಆರಂಭಿಸಿದ್ದಾರೆ ಎಂಬ ಸಿಪಿಎಂ ನಾಯಕ ಕೆ ಅನಿಲ್ ಕುಮಾರ್ ಹೇಳಿಕೆ ಕೇರಳ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದನ್ನು ಬಿಟ್ಟುಬಿಡುವಂತೆ ನಮ್ಮ ಪಕ್ಷವು ಪ್ರಭಾವ ಬೀರಿದೆ ಎಂದು ಕೆ ಅನಿಲ್ ಕುಮಾರ್ ಹೇಳಿದ್ದಾರೆ.
ನಾಸ್ತಿಕ ಗುಂಪು ಆಯೋಜಿಸಿದ್ದ ಸೆಮಿನಾರ್ನಲ್ಲಿ ಅವರು ನೀಡಿರುವ ಹೇಳಿಕೆಗೆ ಹಲವಾರು ಧಾರ್ಮಿಕ ಸಂಘಟನೆಗಳು ಮತ್ತು ವಿದ್ವಾಂಸರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಸಿಪಿಐ(ಎಂ) ತನ್ನ ದ್ವಂದ್ವ ನೀತಿಯನ್ನು ಎತ್ತಿ ತೋರಿಸಿದೆ ಎಂದು ಸುನ್ನಿ ವಿದ್ವಾಂಸರ ಸಂಘಟನೆಯಾದ ಸಮಸ್ತ ಹೇಳಿದೆ. ಐಯುಎಂಎಲ್ ನಾಯಕರಾದ ಕೆ ಎಂ ಶಾಜಿ ಮತ್ತು ಕೆಪಿಎ ಮಜೀದ್ ಕೂಡ ಕುಮಾರ್ ಹೇಳಿಕೆ ಕುರಿತು ಸಿಪಿಐ(ಎಂ) ಅನ್ನು ಖಂಡಿಸಿದ್ದಾರೆ.
ಹೇಳಿಕೆ ವಿವಾದವಾಗುತ್ತಿದ್ದಂತೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಅವರು ಅನಿಲ್ ಕುಮಾರ್ ಅವರ ಹೇಳಿಕೆಗಳನ್ನು ತಿರಸ್ಕರಿಸಿದ್ದು, ಈ ಟೀಕೆಗಳು ಸೂಕ್ತವಲ್ಲ, ಇದು ಪಕ್ಷದ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಸ್ತ್ರಧಾರಣೆ ವ್ಯಕ್ತಿಯ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು ಅದನ್ನು ಯಾರೂ ಅತಿಕ್ರಮಿಸಬಾರದು ಎಂದು ಅವರು ಹೇಳಿದರು.