ಮಧ್ಯಪ್ರದೇಶ | ಗೀತಾ ಜಯಂತಿ ಎಕ್ಸ್ಪ್ರೆಸ್ ರೈಲಿನ ಕೋಚ್ ಗೆ ಬೆಂಕಿ
Photo: X
ಹೊಸದಿಲ್ಲಿ: ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ರವಿವಾರ ಬೆಳಿಗ್ಗೆ ಗೀತಾ ಜಯಂತಿ ಎಕ್ಸ್ಪ್ರೆಸ್ ರೈಲಿನ ಕೋಚ್ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ.
ಘಟನೆಯಿಂದ ಯಾವುದೇ ಗಾಯಗಳು ವರದಿಯಾಗಿಲ್ಲ. ಬೆಂಕಿಯನ್ನು ತ್ವರಿತವಾಗಿ ಹತೋಟಿಗೆ ತರಲಾಯಿತು.
ಜಿಲ್ಲಾ ಕೇಂದ್ರದಿಂದ 25 ಕಿಲೋಮೀಟರ್ ದೂರದಲ್ಲಿರುವ ಇಶಾನಗರ ಪೊಲೀಸ್ ಠಾಣೆ ಬಳಿ ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಟೇಷನ್ ಮಾಸ್ಟರ್ ಆಶಿಶ್ ಯಾದವ್ ಪ್ರಕಾರ, ಬೆಂಕಿಯಿಂದ ರೈಲು ಸಂಚಾರ ಸುಮಾರು ಒಂದು ಗಂಟೆ ತಡವಾಯಿತು.
ರೈಲಿಗೆ ಇಶಾನಗರ ನಿಲ್ದಾಣದಲ್ಲಿ ಎರಡು ನಿಮಿಷಗಳ ನಿಲುಗಡೆ ನಿಗದಿಯಾಗಿತ್ತು. ಕುರುಕ್ಷೇತ್ರ ಮತ್ತು ಖಜುರಾಹೊ ನಡುವೆ ಸಂಚರಿಸುವ ಗೀತಾ ಜಯಂತಿ ಎಕ್ಸ್ಪ್ರೆಸ್ನ ಡಿ 5 ಕೋಚ್ನಿಂದ ಹೊಗೆ ಬರುತ್ತಿರುವುದನ್ನು ರೈಲ್ವೆ ಸಿಬ್ಬಂದಿ ಗಮನಿಸಿದರು. ನಂತರ ಸಿಬ್ಬಂದಿ ರೈಲನ್ನು ನಿಲ್ಲಿಸಿದರು.
"ರೈಲ್ವೆ ಸಿಬ್ಬಂದಿ ತಕ್ಷಣವೇ ಅಗ್ನಿಶಾಮಕಗಳನ್ನು ಬಳಸಿ ಬೆಂಕಿಯನ್ನು ನಿಯಂತ್ರಿಸಿದರು" ಎಂದು ಯಾದವ್ ಹೇಳಿದರು. ಕೋಚ್ನ ಕೆಳಗಡೆ ರಬ್ಬರ್ ಬಿಸಿಯಾದ್ದರಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸ್ಟೇಷನ್ ಮಾಸ್ಟರ್ ಹೇಳಿದರು. ಕೋಚ್ಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.