ಜಾಗತಿಕವಾಗಿ ಹದಿಹರೆಯದವರು ಪ್ರತಿ ದಿನ 8ರಿಂದ 10 ಗಂಟೆ ಟಿವಿ, ವಿದ್ಯುನ್ಮಾನ ಸಾಧನಗಳಲ್ಲಿ ಮುಳುಗಿರುತ್ತಾರೆ : ಅಧ್ಯಯನ ವರದಿ
ಸಾಂದರ್ಭಿಕ ಚಿತ್ರ | PC : freepik
ಹೊಸದಿಲ್ಲಿ : ಜಾಗತಿಕವಾಗಿ ಹದಿಹರೆಯದವರು ಪ್ರತಿ ದಿನ ಸರಾಸರಿ ಎಂಟರಿಂದ ಹತ್ತು ಗಂಟೆಗಳ ಕಾಲ ದೈಹಿಕ ಚಟುವಟಿಕೆಗಳಿಂದ ವಿಮುಖರಾಗಿ ಟಿವಿ ವೀಕ್ಷಣೆ, ಮೊಬೈಲ್ ಬಳಕೆಯಂತಹ ಜಡ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಎಂದು ಇಂಟರ್ನ್ಯಾಷನಲ್ ಫಿಜಿಕಲ್ ಆ್ಯಕ್ಟಿವಿಟಿ ಆ್ಯಂಡ್ ದಿ ಎನ್ವಿರಾನ್ಮೆಂಟ್ ನೆಟ್ವರ್ಕ್ (ಐಪಿಇಎನ್) ನಡೆಸಿರುವ ಅಧ್ಯಯನವು ಬಹಿರಂಗಗೊಳಿಸಿದೆ.
ಪರಿಸರ ಮತ್ತು ಜೀವನ ಶೈಲಿ ಅಂಶಗಳು ವಿವಿಧ ಸಾಂಸ್ಕೃತಿಕ ಸಮುದಾಯಗಳಾದ್ಯಂತ 11ರಿಂದ 19 ವರ್ಷ ವಯೋಮಾನದ ಹದಿಹರೆಯದವರ ಜಡತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎನ್ನುವುದರ ಮೇಲೆ ಅಧ್ಯಯನ ವರದಿಯು ಬೆಳಕು ಚೆಲ್ಲಿದೆ.
ಜಾಗತಿಕ ಮಟ್ಟದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಟಿವಿ ವೀಕ್ಷಣೆ, ವಿದ್ಯುನ್ಮಾನ ಸಾಧನಗಳ ಬಳಕೆ,ವೀಡಿಯೊ ಗೇಮ್ಗಳನ್ನು ಆಡುವುದು ಮತ್ತು ವಾಹನಗಳಲ್ಲಿ ಸವಾರಿ ಇವು ಜಡ ಚಟುವಟಿಕೆಗಳಲ್ಲಿ ಸೇರಿವೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಬಿಹೇವಿಯರಲ್ ನ್ಯೂಟ್ರಿಷನ್ ಆ್ಯಂಡ್ ಫಿಜಿಕಲ್ ಆ್ಯಕ್ಟಿವಿಟಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು 6,302 ಹದಿಹರೆಯದವರು ಮತ್ತು ಅವರ ಪೋಷಕರಿಂದ ದತ್ತಾಂಶಗಳನ್ನು ವಿಶ್ಲೇಷಿಸಿದೆ. ಉಭಯ ಲಿಂಗಗಳು ಜಡ ಚಟುವಟಿಕೆಗಳಲ್ಲಿ ಕಳೆಯುವ ಸಮಯದ ಹೆಚ್ಚಿನ ಪಾಲನ್ನು ಸಾಮಾಜಿಕ ಮಾಧ್ಯಮಗಳು ಕಬಳಿಸುತ್ತಿವೆ. ಮನರಂಜನೆಗಾಗಿ ಪರದೆ ವೀಕ್ಷಣೆ ಸಮಯವು ದಿನಕ್ಕೆ ಸರಾಸರಿ 3.8 ಗಂಟೆಗಳಾಗಿದ್ದರೆ ಸಾರಿಗೆ ಸಂಬಂಧಿತ ಆಸೀನ ಸಮಯವು ದಿನಕ್ಕೆ ಸುಮಾರು 40 ನಿಮಿಷಗಳಷ್ಟಿದೆ ಎನ್ನುವುದನ್ನು ಅಧ್ಯಯನವು ಕಂಡುಕೊಂಡಿದೆ.
ಹದಿಹರೆಯದವರಲ್ಲಿ ಜಡ ವರ್ತನೆಯ ಜಾಗತಿಕ ಮಾದರಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಈ ಅಧ್ಯಯನವು ಒಂದು ಮಹತ್ವದ ಹೆಜ್ಜೆಯಾಗಿದೆ. ಸಾಮಾಜಿಕ ಮಾಧ್ಯಮ ಬಳಕೆಯನ್ನು ಜಡ ಸಮಯದ ಮೇಲೆ ಪ್ರಭಾವ ಬೀರುವ ಮಹತ್ವದ ಅಂಶವನ್ನಾಗಿ ಗುರುತಿಸಿರುವುದು ಯುವಜನರಲ್ಲಿ ಸಮತೋಲಿತ ವೀಕ್ಷಣೆಯನ್ನು ಪ್ರೋತ್ಸಾಹಿಸಲು ಮತ್ತು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸಲು ಉದ್ದೇಶಿತ ಮಧ್ಯಸ್ಥಿಕೆಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಮದ್ರಾಸ್ ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷೆ ಹಾಗು ಅಧ್ಯಯನ ವರದಿಯ ಲೇಖಕಿ ಡಾ.ಆರ್.ಎಂ.ಅಂಜನಾ ಹೇಳಿದ್ದಾರೆ.
ಟಿವಿ ಮತ್ತು ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡಲು, ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಸೀಮಿತಗೊಳಿಸಲು ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸಲು ಪೋಷಕರು, ನೀತಿ ನಿರೂಪಕರು ಮತ್ತು ತಂತ್ರಜ್ಞಾನ ಕಂಪನಿಗಳು ಜೊತೆಯಾಗಿ ಕಾರ್ಯ ನಿರ್ವಹಿಸಬೇಕು. ಇದು ಹದಿಹರೆಯದವರಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಲು ಮತ್ತು ಟೈಪ್ 2 ಮಧುಮೇಹ, ಬೊಜ್ಜು ಮತ್ತು ಹೃದಯ ರಕ್ತನಾಳ ಕಾಯಿಲೆಗಳಂತಹ ದೀರ್ಘಕಾಲಿಕ ರೋಗಗಳ ಅಪಾಯವನ್ನು ತಗ್ಗಿಸಲು ನೆರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.