ಜ್ಞಾನವಾಪಿ ಮಸೀದಿ ಪ್ರಕರಣ ; ಸಂಸತ್ ಸಂಕೀರ್ಣದಲ್ಲಿ ಐಯುಎಂಎಲ್ ಸಂಸದರಿಂದ ಪ್ರತಿಭಟನೆ
ಜ್ಞಾನವಾಪಿ ಮಸೀದಿ | Photo: PTI
ಹೊಸದಿಲ್ಲಿ: ‘‘ಜ್ಞಾನವಾಪಿ ಮಸೀದಿ ಉಳಿಸಿ’’ ಹಾಗೂ ‘ಆರಾಧನಾ ಸ್ಥಳಗಳ ಕಾಯ್ದೆ ರಕ್ಷಿಸಿ’ ಪ್ರದರ್ಶನಾ ಫಲಕಗಳೊಂದಿಗೆ ಐಯುಎಂಎಲ್ ಸಂಸದರು ಸಂಸತ್ ಸಂಕೀರ್ಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ವಾರಣಾಸಿ ಜ್ಞಾನವಾಪಿ ಮಸೀದಿಯಲ್ಲಿರುವ ತಳ ಅಂತಸ್ತಿನಲ್ಲಿ ಪೂಜೆ ನಡೆದ ದಿನದ ಬಳಿಕ, ಕೆಳ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಹಾಗೂ ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ ಮುನ್ನ ಅವರು ಪ್ರತಿಭಟನೆ ನಡೆಸಿದ್ದಾರೆ.
ಸಂಸತ್ ಸಂಕೀರ್ಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಐಯುಎಂಎಲ್ ಲೋಕಸಭಾ ಸಂಸದರಾದ ಇ.ಟಿ. ಮುಹಮ್ಮದ್ ಬಶೀರ್, ಕನಿ ಕೆ. ನವಾಸ್ ಹಾಗೂ ಅಬ್ದುಸ್ಸಮದ್ ಸಾಮ್ದಾನಿ ಅವರು ಪ್ರತಿಭಟನೆ ನಡೆಸಿದರು.
‘‘ಜ್ಞಾನವಾಪಿ ಮಸೀದಿ ರಕ್ಷಿಸಿ’’, ‘‘ಆರಾಧನ ಸ್ಥಳಗಳ ಕಾಯ್ದೆ 1991ನ್ನು ರಕ್ಷಿಸಿ’’ ಹಾಗೂ ‘‘ಜಾತ್ಯತೀತತೆ ರಕ್ಷಿಸಿ’’ ಮೊದಲಾದ ಪ್ರದರ್ಶನಾ ಫಲಕವನ್ನು ಅವರು ಹಿಡಿದುಕೊಂಡಿದ್ದರು.
ಜ್ಞಾನವಾಪಿ ಮಸೀದಿಯ ತಳ ಅಂತಸ್ತಿನಲ್ಲಿ ಹಿಂದೂ ಭಕ್ತರಿಗೆ ಪೂಜೆ ಆರಂಭಿಸಲು ಅನುಮತಿ ನೀಡಿ ವಾರಣಾಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದ 8 ಗಂಟೆಗಳ ಬಳಿಕ ಗುರುವಾರ ಮುಂಜಾನೆ ಮಸೀದಿಯ ದಕ್ಷಿಣ ತಳ ಅಂತಸ್ತಿನಲ್ಲಿ ಪೂಜೆ ನೆರವೇರಿಸಲಾಗಿತ್ತು.
ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಾಗೂ ತುರ್ತು ವಿಚಾರಣೆ ಕೋರಿ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿತ್ತು.