ಜ್ಞಾನವಾಪಿ ಮಸೀದಿ ಸಮೀಕ್ಷೆ : ವರದಿ ಸಲ್ಲಿಕೆಗೆ ಇನ್ನೂ 10 ದಿನ ದಿನಗಳ ಸಮಯ ನೀಡಿದ ವಾರಾಣಸಿ ನ್ಯಾಯಾಲಯ
ಜ್ಞಾನವಾಪಿ ಮಸೀದಿ | Photo : PTI
ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿಯನ್ನು ಸಲ್ಲಿಸಲು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ (ಎಎಸ್ಐ)ಗೆ ವಾರಾಣಸಿಯ ನ್ಯಾಯಾಲಯವೊಂದು ಗುರುವಾರ ಇನ್ನೂ 10 ದಿನಗಳ ಹೆಚ್ಚುವರಿ ಸಮಯಾವಕಾಶವನ್ನು ಒದಗಿಸಿದೆ.
ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯವೊಂದರ ಮೇಲೆ ಕಟ್ಟಲಾಗಿತ್ತೇ ಎನ್ನುವುದನ್ನು ಪತ್ತೆಹಚ್ಚಲು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯು ಸಮೀಕ್ಷೆಯೊಂದನ್ನು ನಡೆಸುತ್ತಿದೆ. ತನಗೆ ಈ ಪ್ರಕ್ರಿಯೆಯನ್ನು ಮುಗಿಸಲು ಇನ್ನೂ ಮೂರು ವಾರಗಳು ಬೇಕು ಎಂದು ಕೋರಿ ಅದು ನವೆಂಬರ್ 28ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ವರದಿ ಪೂರ್ಣಗೊಳಿಸಲು ಪುರಾತತ್ವ ಇಲಾಖೆಯು ಸಮಯಾವಕಾಶ ವಿಸ್ತರಣೆ ಪಡೆದಿರುವುದು ಇದು ಆರನೇ ಬಾರಿಯಾಗಿದೆ.
ಇನ್ನೂ ಹೆಚ್ಚಿನ ಸಮಯಾವಕಾಶವನ್ನು ಕೇಳದಂತೆ ನ್ಯಾಯಾಲಯವು ಪುರಾತತ್ವ ಇಲಾಖೆಗೆ ಸೂಚಿಸಿದೆ ಎಂದು ಇಲಾಖೆಯ ಪರವಾಗಿ ಅರ್ಜಿ ಸಲ್ಲಿಸಿದ ಸರಕಾರಿ ವಕೀಲ ಅಮಿತ್ ಶ್ರೀವಾಸ್ತವ ಹೇಳಿದರು.
ಮಸೀದಿ ಆವರಣದಲ್ಲಿ ಪ್ರಾರ್ಥನೆ ಮಾಡುವ ಹಕ್ಕು ಕೋರಿ ಹಿಂದೂ ಧರ್ಮಾನುಯಾಯಿಗಳ ಗುಂಪೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿರುವ ವಾರಾಣಸಿ ನ್ಯಾಯಾಲಯವು, ಮಸೀದಿ ಆವರಣದಲ್ಲಿ ಸಮೀಕ್ಷೆಗೆ ಜುಲೈ 21ರಂದು ಆದೇಶ ನೀಡಿತ್ತು. ಆದರೆ, ಜುಲೈ 24ರಂದು ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ಸಮೀಕ್ಷೆಯ ವಿರುದ್ಧ ಹೈಕೋರ್ಟ್ಗೆ ಹೋಗಲು ಮಸೀದಿ ಸಮಿತಿಗೆ ಅವಕಾಶ ನೀಡಿತ್ತು.
ಆಗಸ್ಟ್ 3ರಂದು, ಅಲಹಾಬಾದ್ ಹೈಕೋರ್ಟ್ ಮಸೀದಿ ಸಮಿತಿಯ ಅರ್ಜಿಯನ್ನು ತಳ್ಳಿಹಾಕಿ, ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ಅನುಮತಿ ನೀಡಿತ್ತು. ‘‘ನ್ಯಾಯದ ಹಿತಾಸಕ್ತಿಯಿಂದ ಇದು ಅಗತ್ಯವಾಗಿದೆ’’ ಎಂದು ಹೈಕೋರ್ಟ್ ಹೇಳಿತ್ತು. ಹೈಕೋರ್ಟ್ನ ಈ ನಿರ್ಧಾರವನ್ನು ಮರುದಿನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.
ಮಸೀದಿ ಆವರಣದಲ್ಲಿ ಪತ್ತೆಯಾದ ಅಂಡಾಕಾರದ ವಸ್ತುವಿನ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಬಹುದಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಮೇ ತಿಂಗಳಲ್ಲಿ ತೀರ್ಪು ನೀಡಿದ ಬಳಿಕ, ವಾರಾಣಸಿ ನ್ಯಾಯಾಲಯದ ತೀರ್ಪು ಹೊರಬಿದ್ದಿತ್ತು