ಗೋವಾ | 11.67 ಕೋ. ರೂ. ಮೌಲ್ಯದ ಗಾಂಜಾ ವಶ

ಸಾಂದರ್ಭಿಕ ಚಿತ್ರ | PC : freepik.com
ಪಣಜಿ: 11.67 ಕೋ. ರೂ. ಮೌಲ್ಯದ ಗಾಂಜಾ (ಹೈಡ್ರೋಫೋನಿಕ್ ವೀಡ್) ಹೊಂದಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಗೋವಾದ ಇತಿಹಾಸದಲ್ಲಿ ವಶಪಡಿಸಿಕೊಳ್ಳಲಾದ ಅತ್ಯಧಿಕ ಪ್ರಮಾಣದ ಮಾದಕ ವಸ್ತು ಎಂದು ಅವರು ಹೇಳಿದ್ದಾರೆ.
ಪಣಜಿ ಹಾಗೂ ಮಪುಸಾ ನಗರಗಳ ನಡುವಿನ ಗುಯಿರಿಮ್ ಗ್ರಾಮದಿಂದ ಈ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ಕ್ರೈಮ್ ಬ್ರಾಂಚ್ನ ವಕ್ತಾರ ತಿಳಿಸಿದ್ದಾರೆ.
‘‘ನಾವು 11.67 ಕೋ.ರೂ. ಮೌಲ್ಯದ 11.672 ಕಿ.ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದೇವೆ. ಇದು ಗೋವಾದ ಇತಿಹಾಸದಲ್ಲಿ ವಶಪಡಿಸಿಕೊಳ್ಳಲಾದ ಅತ್ಯಧಿಕ ಪ್ರಮಾಣದ ಮಾದಕ ದ್ರವ್ಯ. ಈತನ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಶನಿವಾರ ತನ್ನ ‘ಎಕ್ಸ್’ನ ಪೊಸ್ಟ್ನಲ್ಲಿ ಪೊಲೀಸರನ್ನು ಪ್ರಶಂಸಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದ ಅತಿ ದೊಡ್ಡ ಮಾದಕ ದ್ರವ್ಯದ ಜಾಲವನ್ನು ಬೇಧಿಸಿರುವುದಕ್ಕೆ ಗೋವಾ ಪೊಲೀಸ್ನ ಕ್ರೈಮ್ ಬ್ರಾಂಚ್ಗೆ ಅಭಿನಂದನಾರ್ಹರು ಎಂದಿದ್ದಾರೆ.