ಸರ್ವಕಾಲಿಕ ದಾಖಲೆ ಮಟ್ಟ ತಲುಪಿದ ಚಿನ್ನದ ಬೆಲೆ
ವಾಷಿಂಗ್ಟನ್: ಫೆಡರಲ್ ರಿಸರ್ವ್ ಈ ವರ್ಷ ವಿತ್ತೀಯ ನೀತಿಯನ್ನು ಸುಲಲಿತಗೊಳಿಸುವ ಪ್ರಕ್ರಿಯೆ ಆರಂಭಿಸಲಿದೆ ಎಂಬ ನಿರೀಕ್ಷೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಸಂಘರ್ಷ ಹೆಚ್ಚುತ್ತಿರುವ ಕಾರಣದಿಂದ ಚಿನ್ನದ ಬೆಲೆ ಹೊಸ ಎತ್ತರಕ್ಕೇರಿದೆ.
ಸೋಮವಾರ ಏಷ್ಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡ 1.4ರಷ್ಟು ಏರಿಕೆ ಕಂಡು ಪ್ರತಿ ಔನ್ಸ್ ಬೆಲೆ 2450 ಡಾಲರ್ ತಲುಪಿದೆ. ಕಳೆದ ಏಪ್ರಿಲ್ನಲ್ಲಿ ತಲುಪಿದ್ದ ಇದುವರೆಗಿನ ಗರಿಷ್ಠ ದಾಖಲೆಯನ್ನು ಮುರಿದಿದೆ. ಮುಂದಿನ ಸೆಪ್ಟೆಂಬರ್ ವೇಳೆಗೆ ಸಾಲದ ವೆಚ್ಚವನ್ನು ಫೆಡ್ಬ್ಯಾಂಕ್ ಇಳಿಸಲಿದೆ ಎಂಬ ನಿರೀಕ್ಷೆ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣ. ಫೆಡ್ಬ್ಯಾಂಕ್ ಕಡಿಮೆ ಬಡ್ಡಿ ನೀಡಲಿದೆ ಎಂಬ ನಿರೀಕ್ಷೆಯಿಂದ ಚಿನ್ನದ ಬೇಡಿಕೆ ಅಧಿಕವಾಗುತ್ತಿದೆ.
ಏಪ್ರಿಲ್ ತಿಂಗಳ ಹಣದುಬ್ಬರ ನಿರೀಕ್ಷೆಗಿಂತ ಅಧಿಕ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಕುಸಿದಿತ್ತು. ಇದು ಚಿನ್ನದ ಬೆಲೆ ಏರಿಕೆಗೆ ಬೆಂಬಲ ನೀಡಿದೆ. ಕಮೋಡಿಟಿ ಫ್ಯೂಚರ್ಸ್ ಟ್ರೇಡಿಂಗ್ ಕಮಿಷನ್ ಅಂಕಿ ಅಂಶಗಳ ಪ್ರಕಾರ ಮೇ 14ಕ್ಕೆ ಕೊನೆಗೊಂಡ ವಾರದಲ್ಲಿ ಚಿನ್ನದ ಬೆಲೆ ಮೂರು ವಾರಗಳ ಅಧಿಕ ಮಟ್ಟವನ್ನು ತಲುಪಿತ್ತು.
ಚಿನ್ನದ ಸದೃಢತೆ ಕೇಂದ್ರೀಯ ಬ್ಯಾಂಕಿನ ಖರೀದಿ, ಏಷ್ಯಾದಲ್ಲಿ ಆಕರ್ಷಕ ಬೇಡಿಕೆ ಹೆಚ್ಚಳ ಮತ್ತು ಉಕ್ರೇನ್ ಹಾಗೂ ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಸಂಘರ್ಷಗಳು ಮತ್ತಿತರ ಅಂಶಗಳ ಜತೆ ಸಂಪರ್ಕ ಹೊಂದಿದೆ. ಬೆಳ್ಳಿ ಕೂಡಾ 2012ರ ಡಿಸೆಂಬರ್ ಬಳಿಕದ ಗರಿಷ್ಠ ಮಟ್ಟವನ್ನು ತಲುಪಿದ್ದು, ಶುಕ್ರವಾರ ವಿಸ್ತೃತ ಭೌತಿಕ ಲೋಹ ಮಾರುಕಟ್ಟೆಯಲ್ಲಿ ತಾಮ್ರದಂಥ ಲೋಹಗಳಿಗೆ ಹೂಡಿಕೆದಾರರ ಬೇಡಿಕೆ ಹೆಚ್ಚಿರುವುದು ಕೂಡ ಇದಕ್ಕೆ ಪೂರಕವಾಗಿದೆ.