ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್

ಹೊಸದಿಲ್ಲಿ: ಭಾರತದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಗೂಗಲ್ ವಿಶಿಷ್ಟ ಹಾಗೂ ಚೇತೋಹಾರಿ ಡೂಡಲ್ ಅನ್ನು ಬಿಡುಗಡೆ ಮಾಡಿದ್ದು, ಅದನ್ನು ಸಾಂಪ್ರದಾಯಿಕ ಸೊಬಗಿನೊಂದಿಗೆ ದೇಶದ ವೈವಿಧ್ಯತೆಯನ್ನು ಪ್ರಾಣಿಗಳು ಹಾಗೂ ಪಕ್ಷಿಗಳ ಚಿತ್ರಣದೊಂದಿಗೆ ಕಲಾತ್ಮಕವಾಗಿ ಪ್ರದರ್ಶಿಸಿದೆ.
ಪುಣೆ ಮೂಲದ ಅತಿಥಿ ಕಲಾವಿದ ರೋಹನ್ ದಹೋತ್ರೆ ಸೃಷ್ಟಿಸಿರುವ ಈ ಡೂಡಲ್ ನಲ್ಲಿ ಲಡಾಖಿ ದಿರಿಸಿನೊಂದಿಗೆ ಹಿಮ ಚಿರತೆ, ಸಂಗೀತ ವಾದ್ಯವನ್ನು ಹಿಡಿದುಕೊಂಡು, ಧೋತಿ-ಕುರ್ತಾದಲ್ಲಿರುವ ಹುಲಿ, ನವಿಲು ಹಾಗೂ ಚಿಗರೆಗಳಂತಹ ಪ್ರಾಣಿಗಳು ಪ್ರಾದೇಶಿಕ ದಿರಿಸಿನಲ್ಲಿ ಚಿತ್ರಿಸುವ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಹಿರಿಮೆಯನ್ನು ಸಾಂಕೇತಿಕವಾಗಿ ತೋರಿಸಲಾಗಿದೆ. ಈ ಕಲಾಕೃತಿಯಲ್ಲಿ ಅತಿ ವಾಸ್ತವಿಕವಾದ ವಸ್ತುಗಳೊಂದಿಗೆ ಗೂಗಲ್ ನ ಆರು ಅಕ್ಷರಗಳು ಈ ಪರಿಕಲ್ಪನೆಯೊಂದಿಗೆ ಸೀಮಾತೀತವಾಗಿ ಹೊಂದಿಕೊಳ್ಳುವಂತೆ ಹಾಗೂ ವನ್ಯಜೀವಿಗಳ ಪಥಸಂಚಲನಕ್ಕೆ ಹೊಂದಿಕೆಯಾಗುವಂತೆ ಚಿತ್ರಿಸಲಾಗಿದೆ.
ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ 16 ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 16 ಸ್ತಬ್ಧ ಚಿತ್ರಗಳು ಹಾಗೂ ಕೇಂದ್ರ ಸಚಿವಾಲಯಗಳು ಹಾಗೂ ಸಂಸ್ಥೆಗಳ 15 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. ಈ ಪಥ ಸಂಚಲನದಲ್ಲಿ ಮಧ್ಯಪ್ರದೇಶದ ಚೀತಾ ಯೋಜನೆ ಹಾಗೂ ಕುನೊ ರಾಷ್ಟ್ರೀಯ ಉದ್ಯಾನವನ ಹೊಂದಿರುವ ಸ್ತಬ್ಧ ಚಿತ್ರ ಪ್ರಮುಖ ಆಕರ್ಷಣೆಯಾಗಿದೆ.