"ದೂರವಾಣಿ ಕದ್ದಾಲಿಸಲಾಗುತ್ತಿದೆ": ತಮ್ಮದೇ ಸರಕಾರದ ವಿರುದ್ಧವೇ ರಾಜಸ್ಥಾನ ಸಚಿವ ಆರೋಪ
ವಿಧಾನಸಭೆಯಲ್ಲಿ ಗದ್ದಲ

PC : PTI
ಜೈಪುರ: ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಸಚಿವ ಕಿರೋಡಿ ಲಾಲ್ ಮೀನಾರ ಆರೋಪದ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿಭಟಿಸಿತು. ಕಪ್ಪು ಪಟ್ಟಿ ಧರಿಸಿದ ಶಾಸಕರು ಘೋಷಣೆಗಳನ್ನು ಕೂಗಿ, ಕಲಾಪಕ್ಕೆ ಅಡ್ಡಿ ಪಡಿಸಿದ್ದರಿಂದ, ಸದನವನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಗಿತ್ತು.
ವಿಧಾನಸಭೆಯಲ್ಲಿ ಮೀನಾರ ಗಂಭೀರ ಆರೋಪಗಳನ್ನು ಉಲ್ಲೇಖಿಸಿದ ರಾಜಸ್ಥಾನ ವಿಧಾನಸಭಾ ವಿಪಕ್ಷ ನಾಯಕ ಟೀಕಾರಾಮ್ ಜುಲ್ಲಿ, ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹಿಸಿದರು. ಈ ಆರೋಪದ ಕುರಿತು ಮುಖ್ಯಮಂತ್ರಿಗಳು ವಿವರಣೆ ನೀಡಬೇಕು ಹಾಗೂ ತನಿಖೆಗೆ ಆದೇಶಿಸಬೇಕು. ಇಲ್ಲವೆ, ಮೀನಾರನ್ನು ತಮ್ಮ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ವಿರೋಧ ಪಕ್ಷಗಳ ಘೋಷಣೆಗಳಿಗೆ ತಿರುಗೇಟು ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಜೋಗರಾಮ್ ಪಟೇಲ್, ಅವರನ್ನು ಕಳ್ಳರು ಎಂದು ಬಣ್ಣಿಸಿದರು. ಆದರೆ, ಮೊದಲಿಗೆ ಸದನದ ಬಾವಿಯಲ್ಲಿ ಹಾಗೂ ನಂತರ ವಿಧಾನಸಭೆಯ ಮೆಟ್ಟಿಲುಗಳ ಮೇಲೆ ಘೋಷಣೆಗಳನ್ನು ಕೂಗುವುದನ್ನು ಕಾಂಗ್ರೆಸ್ ಶಾಸಕರು ಮುಂದುವರಿಸಿದರು.
ಜುಲ್ಲಿಯ ಆಗ್ರಹವನ್ನು ಪುನರುಚ್ಚರಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ಈ ವಿಷಯದ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟ ಹೇಳಿಕೆ ನೀಡುವವರೆಗೂ ಸದನ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ನನ್ನ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂದು ತಮ್ಮದೇ ಸರಕಾರದ ವಿರುದ್ಧ ಆರೋಪಿಸಿರುವ ಮೀನಾ, ನನ್ನನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ. ಇಂತಹುದೇ ಅನುಭವ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರದಲ್ಲೂ ಆಗಿತ್ತು ಎಂದು ಗುಡುಗಿದರು.
ರಾಜ್ಯಪಾಲರ ಬಜೆಟ್ ಭಾಷಣದ ಕುರಿತ ಚರ್ಚೆಯ ಕಡೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ರಾಜ್ಯಪಾಲ ಹರಿಭಾವು ಬಗಾಡೆಗೆ ಭಾಷಣದ ಕುರಿತು ವಿಪಕ್ಷ ನಾಯಕ ಟೀಕಾರಾಮ್ ಜುಲ್ಲಿ ಹಾಗೂ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ತಮ್ಮ ಅನಿಸಿಕೆಗಳನ್ನು ಸದನದಲ್ಲಿ ಮಂಡಿಸುವವರಿದ್ದರು.