ರಾಜ್ಯ ಸ್ಥಾನಮಾನ ಮರಳಿಸಲು ಸರಕಾರ ಬದ್ಧ: ಜಮ್ಮು-ಕಾಶ್ಮೀರ ಬಜೆಟ್ ಅಧಿವೇಶನದಲ್ಲಿ ಲೆಫ್ಟಿನೆಂಟ್ ಗನರ್ವರ್ ಭರವಸೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂರ್ಣ ರಾಜ್ಯ ಸ್ಥಾನಮಾನವನ್ನು ಮರಳಿಸಲು ತನ್ನ ಸರಕಾರವು ಬದ್ಧವಾಗಿದೆ ಎಂಬುದಾಗಿ ಪುನರುಚ್ಚರಿಸಿರುವ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಇಲ್ಲಿನ ಜನರ ನ್ಯಾಯೋಚಿತ ಬೇಡಿಕೆಗಳನ್ನು ಸರಕಾರವು ಈಡೇರಿಸಲಿದೆ ಎಂದು ಹೇಳಿದ್ದಾರೆ.
ಶನಿವಾರ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ರಾಜ್ಯ ಸ್ಥಾನಮಾನದ ಬಗ್ಗೆ ಜನರ ಭಾವನೆಗಳು ಹಾಗೂ ಅದರ ರಾಜಕೀಯ ಮಹತ್ವದ ಬಗ್ಗೆ ನನ್ನ ಸರಕಾರಕ್ಕೆ ಅರಿವಿದೆ. ಈ ಪ್ರಕ್ರಿಯೆಯು ಶಾಂತಿ, ಸ್ಥಿರತೆ ಮತ್ತು ಪ್ರಗತಿಯನ್ನು ಖಾತರಿಪಡಿಸಬೇಕು ಹಾಗೂ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರೊಂದಿಗೆ ಸರಕಾರವು ಮಾತುಕತೆ ನಡೆಸುತ್ತಿದೆ’’ ಎಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಹಲವು ಸರಕಾರಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಸೇರಿದಂತೆ ಹಲವು ವಿವಾದಾಸ್ಪದ ವಿಷಯಗಳಲ್ಲಿ ಸರಕಾರವನ್ನು ಪ್ರಶ್ನಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸುತ್ತಿರುವಂತೆಯೇ ಲೆಫ್ಟಿನೆಂಟ್ ಗವರ್ನರ್ ಈ ಹೇಳಿಕೆ ನೀಡಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ತನ್ನ ಭಾಷಣದಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರ ಹೆಸರನ್ನೂ ಮೊದಲ ಬಾರಿಗೆ ಉಲ್ಲೇಖಿಸಿದ್ದಾರೆ. ಎಲ್ಲಾ 20 ಜಿಲ್ಲೆಗಳೊಂದಿಗೆ ನಡೆಯುವ ಸಭೆಗಳ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಯೇ ವಹಿಸುತ್ತಿದ್ದಾರೆ, ಆಮೂಲಕ ಜನರ ಭಾವನೆಗಳನ್ನು, ಪ್ರಾದೇಶಿಕ ಅಗತ್ಯಗಳನ್ನು ಅವರ ಪ್ರತಿನಿಧಿಗಳೊಂದಿಗೆ ನೇರವಾಗಿ ವ್ಯವಹರಿಸುವ ಮೂಲಕ ತಿಳಿದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.