ಕೇರಳ | 273 ಸ್ಥಳೀಯ ಸಂಸ್ಥೆಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಗಂಭೀರ
ಎ.ಕೆ.ಶಶೀಂದ್ರನ್ | PC : newindianexpress.com
ತಿರುವನಂತಪುರಂ: ಮಾನವ-ವನ್ಯಜೀವಿ ಸಂಘರ್ಷದ ಕುರಿತು ಸಮಗ್ರ ಅಧ್ಯಯನ ನಡೆಸಿರುವ ಅರಣ್ಯ ಇಲಾಖೆಯು, 273 ಸ್ಥಳೀಯ ಸಂಸ್ಥೆಗಳನ್ನು ಗಂಭೀರ ವಲಯ ಎಂದು ಗುರುತಿಸಿದೆ. ಈ ಪೈಕಿ 30 ಸ್ಥಳೀಯ ಸಂಸ್ಥೆಗಳನ್ನು ಮಾನವ-ವನ್ಯಜೀವಿ ಸಂಘರ್ಷದ ಪ್ರಮುಖ ಕೇಂದ್ರ ಸ್ಥಳಗಳು ಎಂದು ಗುರುತಿಸಲಾಗಿದೆ. ಈ ಪೈಕಿ ಒಂಭತ್ತು ಸ್ಥಳೀಯ ಸಂಸ್ಥೆಗಳನ್ನು ತೀರಾ ಗಂಭೀರ ವಲಯಗಳೆಂದು ಹೇಳಲಾಗಿದೆ.
ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್, ರಾಜ್ಯದಲ್ಲಿನ ಮಾನವ-ವನ್ಯಜೀವಿ ಸಂಘರ್ಷವನ್ನು ಹತೋಟಿಗೆ ತರಲು ಸಮಗ್ರ ಯೋಜನೆಯನ್ನು ಸರಕಾರ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ನಡೆದಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ಆಧರಿಸಿ ಈ ಅಧ್ಯಯನ ನಡೆದಿದೆ. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿರುವ ವನ್ಯಜೀವಿಗಳ ದಾಳಿಗಳಲ್ಲಿ ಸುಮಾರು 840 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ವರ್ಷ ಸುಮಾರು 39 ಮಂದಿ ಬಲಿಯಾಗಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷವನ್ನು ಹತೋಟಿಗೆ ತರಲು ಸಂಬಂಧಿತ ಮಾನವ-ವನ್ಯಜೀವಿ ಸಂಘರ್ಷದ ಕೇಂದ್ರ ಸ್ಥಳಗಳಿಗೆ ನಿರ್ದಿಷ್ಟ ಸಮಗ್ರ ಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆ-ಡಿಸ್ಕ್ ಸಹಯೋಗದೊಂದಿಗೆ ಅರಣ್ಯ ಇಲಾಖೆಯು ಆಯೋಜಿಸಿದ್ದ ಹ್ಯಾಕಥಾನ್ ನಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ಹತೋಟಿಗಾಗಿ ಆವಿಷ್ಕಾರಿ ಉಪಾಯಗಳನ್ನು ಸೃಜಿಸಲು ‘ಸೇಫ್ ಹ್ಯಾಬಿಟ್ಯಾಟ್ ಹ್ಯಾಕ್’ ಎಂಬ ಆನ್ ಲೈನ್ ಪೋರ್ಟಲ್ ಅನ್ನು ಸಚಿವರು ಲೋಕಾರ್ಪಣೆ ಮಾಡಿದರು.
ನವೋದ್ಯಮಗಳು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ಸಂಶೋಧಕರು ಹಾಗೂ ಇನ್ನಿತರ ತಜ್ಞರನ್ನು ಭಾಗವಹಿಸುವಂತೆ ಆಹ್ವಾನಿಸುವ ಗುರಿಯನ್ನು ಈ ಉಪಕ್ರಮ ಹೊಂದಿದ್ದು, ಸಮಗ್ರ ಯೋಜನೆಗೆ ಕಾರ್ಯತಂತ್ರವನ್ನು ರೂಪಿಸುವ ಉದ್ದೇಶವನ್ನೂ ಹೊಂದಿದೆ.
ಈ ಸಂಘರ್ಷವನ್ನು ಪರಿಹರಿಸಲು ರಾಜ್ಯ ಸರಕಾರವು ಸಂಘರ್ಷ ಪೀಡಿತ ಪ್ರಾಂತ್ಯಗಳನ್ನು 12 ಭೂಭಾಗಗಳನ್ನಾಗಿ ವಿಂಗಡಿಸಿದೆ. ಇದರಿಂದ ಭೂಭಾಗಗಳನ್ನು ವಿಂಗಡಿಸಲು, ಸಮಗ್ರ ಯೋಜನೆಯನ್ನು ಅಳವಡಿಸಲು ಹಾಗೂ ಅವನ್ನು ರಾಜ್ಯ ಮಟ್ಟದ ಕ್ರಿಯಾ ಯೋಜನೆಯನ್ನಾಗಿ ಕ್ರೋಡೀಕರಿಸಲು ಈ ಕ್ರಮವು ನೆರವು ನೀಡಲಿದೆ. ಭೂಭಾಗ ಮಟ್ಟದ ಸಮಗ್ರ ಯೋಜನೆಯನ್ನು ನಂತರದಲ್ಲಿ ರಾಜ್ಯ ಮಟ್ಟದ ಕ್ರಿಯಾ ಯೋಜನೆಯನ್ನಾಗಿ ಕ್ರೋಡೀಕರಿಸಲಾಗುತ್ತದೆ.
ಸೌರ ಬೇಲಿ ಮತ್ತು ತಡೆಗೋಡೆಗಳ ನಿರ್ಮಾಣದಲ್ಲಿನ ಅದಕ್ಷತೆ, ಸುಧಾರಿತ ನೈಜ ಸಮಯದ ನಿಗಾವಣೆ ಸಾಧನಗಳ ಕೊರತೆ ಹಾಗೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಈ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸಲು ಇರುವ ಪ್ರಾಯೋಗಿಕ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಈ ಹ್ಯಾಕಥಾನ್ ಹೊಂದಿದೆ. ಅಲ್ಲದೆ, ವಾಸ್ತವ್ಯ ದರ್ಜೆಯ ಕಡಿತಕ್ಕೆ ಪರಿಹಾರಗಳು ಮತ್ತು ನಿರ್ದಿಷ್ಟ ಪ್ರಾಂತ್ಯಾಧಾರಿತ ಹತೋಟಿ ಕಾರ್ಯತಂತ್ರಗಳನ್ನು ಸೃಷ್ಟಿಸಲು ಒತ್ತು ನೀಡಲಿದೆ.
ಈ ಉಪಕ್ರಮದಲ್ಲಿ ಭಾಗವಹಿಸುವವರು ಡಿಸೆಂಬರ್ 20ರವರೆಗೆ ತಮ್ಮ ಯೋಜನೆಗಳು ಹಾಗೂ ಪರಿಕಲ್ಪನೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮಗೊಳಿಸಿದ ಯೋಜನೆಗಳನ್ನು ಫೆಬ್ರವರಿ 15, 2025ರಂದು ತಿರುವನಂತಪುರಂ ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪ್ರದರ್ಶಿಸಲಾಗುತ್ತದೆ.
ಸೌಜನ್ಯ: newindianexpress.com