ಚೀನಾದ ಬದಲು ಅಮೆರಿಕದಿಂದ ಸರಕುಗಳನ್ನು ತರಿಸಿಕೊಳ್ಳಬಹುದಾದ ಕ್ಷೇತ್ರಗಳನ್ನು ಗುರುತಿಸುವಂತೆ ಉದ್ಯಮಕ್ಕೆ ಸರಕಾರದ ಸೂಚನೆ

sಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಎಪ್ರಿಲ್ 2ರಿಂದ ಜಾರಿಗೊಳ್ಳಲಿರುವ ಅಮೆರಿಕದ ಪ್ರತಿಸುಂಕಗಳಿಂದಾಗಿ ರಫ್ತುಗಳಿಗೆ ಅಡ್ಡಿಗಳುಂಟಾಗುವ ಭೀತಿಗಳ ನಡುವೆಯೇ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಗುರುವಾರ,ಚೀನಾ ಮತ್ತು ಇತರ ದೇಶಗಳ ಬದಲಾಗಿ ಅಮೆರಿಕದಿಂದ ಸರಕುಗಳನ್ನು ಆಮದು ಮಾಡಿಕೊಳ್ಳಬಹುದಾದ ಕ್ಷೇತ್ರಗಳನ್ನು ಗುರುತಿಸುವಂತೆ ಉದ್ಯಮ ರಂಗಕ್ಕೆ ಸೂಚಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಭಾರತವು ಆಟೊಮೊಬೈಲ್ ಮತ್ತು ಕೃಷಿ ಕ್ಷೇತ್ರಗಳಲ್ಲಿ ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಜಾಗತಿಕ ವ್ಯಾಪಾರವನ್ನು ಮರುರೂಪಿಸುತ್ತಿರುವ ಹಾಗೂ ಚೀನಾ ಮತ್ತು ಐರೋಪ್ಯ ಒಕ್ಕೂಟದಂತಹ ಪ್ರಮುಖ ದೇಶಗಳನ್ನೊಳಗೊಂಡ ವ್ಯಾಪಾರ ಸಮರವನ್ನು ಪ್ರಚೋದಿಸುತ್ತಿರುವ ಅಮೆರಿಕದ ವ್ಯಾಪಕ ಪ್ರತಿಸುಂಕಗಳಿಂದ ತಪ್ಪಿಸಿಕೊಳ್ಳಲು ಸುಂಕ ಕಡಿತ ಮತ್ತು ಮಾರುಕಟ್ಟೆ ಪ್ರವೇಶದ ನಿಟ್ಟಿನಲ್ಲಿ ಸರಕಾರವು ಕಾರ್ಯಪ್ರವೃತ್ತವಾಗಿದೆ.
ರಫ್ತುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸರಕಾರವು ಶ್ರಮಿಸುತ್ತಿದೆ ಮತ್ತು ಇದೇ ವೇಳೆ ಭಾರತೀಯ ರಫ್ತುದಾರರಿಗೆ ಉತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಬಹು ತಂತ್ರಗಳನ್ನು ಅನುಸರಿಸುತ್ತಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಉಲ್ಲೇಖಿಸಿ ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಪ್ರತಿಸುಂಕಗಳ ಕುರಿತಂತೆ ಗೋಯಲ್ ರಫ್ತುದಾರರನ್ನು ‘ರಕ್ಷಣಾತ್ಮಕ ಮನಃಸ್ಥಿತಿ’ಯಿಂದ ಹೊರಬರುವಂತೆ ಆಗ್ರಹಿಸಿದ್ದಾರೆ ಮತ್ತು ಎದೆಗುಂದದಂತೆ ಅವರನ್ನು ಉತ್ತೇಜಿಸಿದ್ದಾರೆ.
ಗುರುವಾರ ಉದ್ಯಮ ರಂಗದ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಅಧಿಕಾರಿಗಳು ಅವಕಾಶಗಳು ಮತ್ತು ಈ ಸುಂಕಗಳ ಪರಿಣಾಮಗಳ ಕುರಿತು ಚರ್ಚಿಸಿದ್ದಾರೆ. ಉಕ್ಕು ಮತ್ತು ಅಲ್ಯಮಿನಿಯಂ ರಫ್ತುಗಳ ಮೇಲೆ ಟ್ರಂಪ್ ಹೇರಿರುವ ಪ್ರತಿಶತ 25ರಷ್ಟು ಸುಂಕಗಳು ಈಗಾಗಲೇ ಐದು ಶತಕೋಟಿ ಡಾಲರ್ ಮೌಲ್ಯದ ಸರಕುಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿವೆ ಎಂದು ಈ ಕ್ಷೇತ್ರಗಳ ರಫ್ತುದಾರರು ಸರಕಾರಕ್ಕೆ ತಿಳಿಸಿದ್ದಾರೆ.
ಟ್ರಂಪ್ ಅವರ ಇತ್ತೀಚಿನ ಸುಂಕಗಳು ಐದು ಡಾ.ಮೌಲ್ಯದ ರಫ್ತುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿರುವುದರಿಂದ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂಎಸ್ಎಂಇ) ಕೇತ್ರವು ವಿಶೇಷವಾಗಿ ಕಳವಳಗೊಂಡಿದೆ. ಅಮೆರಿಕಕ್ಕೆ ಸಮುದ್ರಯಾನದ ಅವಧಿಯು ಸುಮಾರು 60 ದಿನಗಳಾಗಿರುವುದರಿಂದ ಅಂದಾಜು ಒಂದು ಬಿಲಿಯನ್ ಡಾ.ಮೌಲ್ಯದ ಸರಕುಗಳು ಪ್ರಸ್ತುತ ಸಾಗರ ಮಧ್ಯದಲ್ಲಿವೆ ಮತ್ತು ಟ್ರಂಪ್ ಸುಂಕಗಳು ಅವುಗಳ ಮೇಲೆ ಪರಿಣಾಮ ಬೀರಲಿವೆ ಎಂದು ಭಾರತೀಯ ಇಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ಪಂಕಜ ಛಡ್ಡಾ ತಿಳಿಸಿದರು.
ಸರಕಾರವು ಜವಳಿ,ರತ್ನಗಳು ಮತ್ತು ಆಭರಣಗಳು,ಕಾರ್ಪೆಟ್ಗಳು ಮತ್ತು ಇಲೆಕ್ಟ್ರಾನಿಕ್ಸ್ನಂತಹ ಕೇತ್ರಗಳಲ್ಲಿ ಮಾರುಕಟ್ಟೆ ಪ್ರವೇಶಕ್ಕೆ ಅಮೆರಿಕಕ್ಕೆ ಅವಕಾಶವನ್ನು ಒದಗಿಸಬಹುದು ಎಂದೂ ಉದ್ಯಮ ಪ್ರತಿನಿಧಿಗಳು ತಿಳಿಸಿದರು.
ಜವಳಿ ಕ್ಷೇತ್ರವು ಅಮೆರಿಕದ ಉತ್ಪನ್ನಗಳ ಮೇಲೆ ಶೂನ್ಯ ಸುಂಕಕ್ಕೆ ಒಲವು ವ್ಯಕ್ತಪಡಿಸಿದರೆ ರತ್ನಗಳು ಮತ್ತು ಆಭರಣಗಳ ಕ್ಷೇತ್ರವು ಕತ್ತರಿಸಿದ ಮತ್ತು ಹೊಳಪು ನೀಡಿದ ವಜ್ರಗಳ ಮೇಲಿನ ಶೇ.5ರಷ್ಟು ಪ್ರಸ್ತುತ ಸುಂಕವನ್ನು ಶೇ.2.5ಕ್ಕೆ ತಗ್ಗಿಸುವಂತೆ ಆಗ್ರಹಿಸಿದೆ.
ಈ ನಡುವೆ,ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ಚೀನಾ, ಮೆಕ್ಸಿಕೊ ಮತ್ತು ಕೆನಡಾದಂತಹ ಪ್ರಮುಖ ದೇಶಗಳು ತೀವ್ರ ಪ್ರತಿಸುಂಕವನ್ನು ಎದುರಿಸುತ್ತಿರುವುದರಿಂದ ಭಾರತವು ಈಗಾಗಲೇ ಹೆಚ್ಚಿನ ಬೇಡಿಕೆಗಳನ್ನು ಸ್ವೀಕರಿಸುತ್ತಿದೆ ಎಂದು ಹಲವು ರಫ್ತುದಾರರು ಸರಕಾರಕ್ಕೆ ತಿಳಿಸಿದ್ದಾರೆ.