ರಕ್ಷಣಾ ಕಾರ್ಯಾಚರಣೆಗಳ ನೇರ ಪ್ರಸಾರ ಮಾಡಬೇಡಿ: ಮಾಧ್ಯಮಗಳಿಗೆ ಸಲಹಾಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರಕಾರ

ಹೊಸದಿಲ್ಲಿ: ಸೇನಾ ಕಾರ್ಯಾಚರಣೆ ಅಥವಾ ಭದ್ರತಾ ಪಡೆಗಳ ಚಲನವಲನಗಳನ್ನು ನೇರ ಪ್ರಸಾರ ಮಾಡಬೇಡಿ ಎಂದು ಶನಿವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಸಲಹಾಸೂಚಿ ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡುವಾಗ ತೀವ್ರ ಜಾಗರೂಕವಾಗಿರಬೇಕಾದ ಅಗತ್ಯವಿದೆ ಎಂದು ಸುದ್ದಿ ಸಂಸ್ಥೆಗಳು, ಡಿಜಿಟಲ್ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರಿಗೂ ಅನ್ವಯವಾಗುವಂತೆ ಈ ಸಲಹಾಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
“ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ದೃಷ್ಟಿಯಿಂದ ಎಲ್ಲ ಮಾಧ್ಯಮ ವೇದಿಕೆಗಳು, ಸುದ್ದಿ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ರಕ್ಷಣೆ ಹಾಗೂ ಇನ್ನಿತರ ಭದ್ರತೆಗೆ ಸಂಬಂಧಿಸಿದ ಕಾರ್ಯಾಚರಣೆಗಳ ಕುರಿತು ವರದಿ ಮಾಡುವಾಗ ಕಟ್ಟುನಿಟ್ಟಾಗಿ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು ಹಾಗೂ ತೀವ್ರ ಜಾಗರೂಕತೆಯನ್ನು ಪ್ರದರ್ಶಿಸಬೇಕು” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಸರಕಾರವು ನಿರ್ದಿಷ್ಟವಾಗಿ ನೈಜ ಸಮಯದ ದೃಶ್ಯಾನವಳಿಗಳ ಪ್ರಸಾರ, ಸೂಕ್ಷ್ಮ ಸ್ಥಳಗಳಿಂದ ನೇರ ಪ್ರಸಾರ ಹಾಗೂ ಪ್ರಗತಿಯಲ್ಲಿರುವ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮೂಲಗಳನ್ನು ಆಧರಿಸಿದ ಸುದ್ದಿಗಳ ಬಳಕೆಯನ್ನು ನಿಷೇಧಿಸಿದೆ.
ಸೂಕ್ಷ್ಮ ಕಾರ್ಯಾಚರಣೆಗಳ ವಿವರಗಳನ್ನು ಅವಧಿಪೂರ್ವದಲ್ಲೇ ಬಯಲುಗೊಳಿಸುವುದರಿಂದ, ಅಂತಹ ಕಾರ್ಯಾಚರಣೆಗಳ ಪ್ರಭಾವ ಮತ್ತು ಅವುಗಳಲ್ಲಿ ಭಾಗಿಯಾಗಿರುವ ಸೇನಾ ಸಿಬ್ಬಂದಿಗಳಿಬ್ಬರ ಮೇಲೂ ಅಪಾಯಕಾರಿ ಪರಿಣಾಮವನ್ನುಂಟು ಮಾಡುವ ಮೂಲಕ, ಶತ್ರುಗಳಿಗೆ ಅಜಾಗರೂಕವಾಗಿ ನೆರವು ಒದಗಿಸಿದಂತಾಗುತ್ತದೆ ಎಂದೂ ಈ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
ಈ ಎಚ್ಚರಿಕೆಗೆ ನಿದರ್ಶನವಾಗಿ ಕಾರ್ಗಿಲ್ ಯುದ್ಧ, 26/11 ಮುಂಬೈ ಭಯೋತ್ಪಾದಕ ದಾಳಿ ಹಾಗೂ ಕಂದಹಾರ್ ವಿಮಾನ ಅಪಹರಣ ಪ್ರಕರಣಗಳ ಅನುಭವವನ್ನು ಪ್ರಕಟಣೆಯಲ್ಲಿ ಹಂಚಿಕೊಳ್ಳಲಾಗಿದೆ. ಬಿಕ್ಕಟ್ಟಿನ ಸಮಯಗಳಲ್ಲಿ ನೇರ ಪ್ರಸಾರ ಮಾಡಿದ್ದರಿಂದಾಗಿ, ಈ ಹಿಂದೆ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂಥ ಅನುದ್ದೇಶಿತ ಪರಿಣಾಮಗಳುಂಟಾಗಿದ್ದವು ಎಂದೂ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿ ಹಿಡಿಯುವಲ್ಲಿ ಮಾಧ್ಯಮಗಳು, ಡಿಜಿಟಲ್ ಮಾಧ್ಯಮ ವೇದಿಕೆಗಳು ಹಾಗೂ ವೈಯಕ್ತಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒತ್ತಿ ಹೇಳಿದೆ.
“ಕಾನೂನು ಅನಿವಾರ್ಯತೆಯಲ್ಲದೆ, ಸಾಮೂಹಿಕ ಕ್ರಮಗಳಿಂದಾಗಿ ಪ್ರಗತಿಯಲ್ಲಿರುವ ಕಾರ್ಯಾಚರಣೆಗಳ ಸಮಗ್ರತೆ ರಾಜಿಯಾಗದಂತೆ ಅಥವಾ ಭದ್ರತಾ ಪಡೆಗಳ ಸಿಬ್ಬಂದಿಗಳ ಜೀವಕ್ಕೆ ಅಪಾಯ ಒದಗದಂತೆ ಖಾತರಿಪಡಿಸುವುದು ಪ್ರತಿಯೊಬ್ಬರ ನೈತಿಕ ಕರ್ತವ್ಯವಾಗಿದೆ” ಎಂದೂ ಈ ಪ್ರಕಟಣೆಯಲ್ಲಿ ಕಿವಿಮಾತು ಹೇಳಲಾಗಿದೆ.