ಭಾರತ-ಮ್ಯಾನ್ಮಾರ್ ನಡುವಿನ ಮುಕ್ತ ಚಲನವಲನ ವ್ಯವಸ್ಥೆ ಅಮಾನತು
ಇನ್ನು ಮುಂದೆ ಗಡಿಪ್ರದೇಶಗಳ ನಿವಾಸಿಗಳು ಭಾರತ ಪ್ರವೇಶಿಸಲು ವೀಸಾ ಅಗತ್ಯ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮ್ಯಾನ್ಮಾರ್ ಗಡಿಯುದ್ದಕ್ಕೂ ಮುಕ್ತ ಚಲನವಲನ ವ್ಯವಸ್ಥೆಯನ್ನು ಭಾರತವು ತಕ್ಷಣದಿಂದಲೇ ಅಮಾನತುಗೊಳಿಸಿದೆ. ಮ್ಯಾನ್ಮಾರ್ನ ಗಡಿಪ್ರದೇಶಗಳ ನಿವಾಸಿಗಳು ಇನ್ನು ಮುಂದೆ ಭಾರತವನ್ನು ಪ್ರವೇಶಿಸಲು ವೀಸಾ ಅಗತ್ಯವಾಗಲಿದೆ.
‘ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಲು ಮತ್ತು ಮ್ಯಾನ್ಮಾರ್ಗೆ ಹೊಂದಿಕೊಂಡಿರುವ ಈಶಾನ್ಯ ಭಾರತದ ರಾಜ್ಯಗಳ ಜನಸಂಖ್ಯಾ ಸ್ವರೂಪವನ್ನು ಕಾಯ್ದುಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಚಲನವಲನ ವ್ಯವಸ್ಥೆ (ಎಫ್ಎಂಆರ್)ಯನ್ನು ರದ್ದುಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿದೆ. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎಫ್ಎಂಆರ್ನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಹೀಗಾಗಿ ಎಫ್ಎಂಆರ್ನ್ನು ತಕ್ಷಣವೇ ಅಮಾನತುಗೊಳಿಸುವಂತೆ ಗೃಹ ಸಚಿವಾಲಯವು ಶಿಫಾರಸು ಮಾಡಿದೆ ’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
1970ರ ದಶಕದಿಂದಲೂ ಭಾರತ-ಮ್ಯಾನ್ಮಾರ್ ನಡುವೆ ಮುಕ್ತ ಚಲನವಲನ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ವ್ಯವಸ್ಥೆಯಡಿ ಭಾರತ ಅಥವಾ ಮ್ಯಾನ್ಮಾರ್ ಪ್ರಜೆಯಾಗಿರುವ,ಗಡಿಯ ಎರಡೂ ಬದಿಗಳಲ್ಲಿ 16 ಕಿ.ಮೀ.ವ್ಯಾಪ್ತಿಯಲ್ಲಿ ವಾಸವಾಗಿರುವ ಗುಡ್ಡಗಾಡು ಬುಡಕಟ್ಟು ಜನರು ಬಾರ್ಡ್ರ್ ಪಾಸ್ನ್ನು ತೋರಿಸಿ ಗಡಿಯನ್ನು ದಾಟಬಹುದು. ಈ ಪಾಸ್ ಸಾಮಾನ್ಯವಾಗಿ ಒಂದು ವರ್ಷದ ಅವಧಿಯನ್ನು ಹೊಂದಿರುತ್ತದೆ ಮತ್ತು ಒಮ್ಮೆ ಗಡಿ ದಾಟಿದರೆ ಎರಡು ವಾರಗಳವರೆಗೆ ಅಲ್ಲಿ ವಾಸವಿರಬಹುದು.
ಮಣಿಪುರ ಸರಕಾರವು ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರಿಂದಲೇ ಎಫ್ಎಂಆರ್ನ್ನು ಅಮಾನತುಗೊಳಿಸಿದೆ.
ಸರಕಾರವು ಮ್ಯಾನ್ಮಾರ್ನೊಂದಿಗಿನ 1,643 ಕಿ.ಮೀ.ಗಡಿಯುದ್ದಕ್ಕೂ ಬೇಲಿಯನ್ನು ನಿರ್ಮಿಸಲಿದೆ ಎಂದು ಶಾ ಫೆ.6ರಂದು ಪ್ರಕಟಿಸಿದ್ದರು.