ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತ ಸುದ್ದಿ ಪ್ರಕಟ: ಬಿಬಿಸಿಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ ಸರಕಾರ

Photo: Youtube/@BBCNews
ಹೊಸದಿಲ್ಲಿ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಬಿಬಿಸಿ ಸುದ್ದಿ ಸಂಸ್ಥೆ ಮಾಡಿರುವ ವರದಿಯ ಪ್ರಸಾರದ ಕುರಿತು ಸೋಮವಾರ ಭಾರತ ಸರಕಾರ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ.
ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಂಡುಕೋರರ ದಾಳಿ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಬಿಬಿಸಿ, “ಕಾಶ್ಮೀರದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತೀಯರ ವೀಸಾಗಳನ್ನು ಅಮಾನತುಗೊಳಿಸಿದೆ” ಎಂದು ಹೇಳಿತ್ತು.
ಈ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಬಿಬಿಸಿಯ ಭಾರತದ ಮುಖ್ಯಸ್ಥರಾದ ಜಾಕಿ ಮಾರ್ಟಿನ್ ಗೆ ಪತ್ರ ಬರೆದಿದೆ.
ಈ ಕುರಿತು ಬಿಬಿಸಿಗೆ ಅಧಿಕೃತ ಪತ್ರ ರವಾನಿಸಿರುವ ಕೇಂದ್ರ ಸರಕಾರ, ಬಿಬಿಸಿಯ ಮುಂದಿನ ವರದಿಗಳ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿಗಾ ವಹಿಸಲಿದೆ ಎಂದೂ ಎಚ್ಚರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ದಾಳಿಯ ಕುರಿತು ಬಿಬಿಸಿ ಮಾಡಿರುವ ವರದಿಯ ಕುರಿತು ಬಿಬಿಸಿಯ ಭಾರತದ ಮುಖ್ಯಸ್ಥ ಜಾಕಿ ಮಾರ್ಟಿನ್ ಬಳಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಳಗಿನ ಬಾಹ್ಯ ಪ್ರಚಾರ ಮತ್ತು ಸಾರ್ವಜನಿಕ ರಾಜತಾಂತ್ರಿಕ ವಿಭಾಗವು ಭಾರತದ ತೀವ್ರ ಆಕ್ಷೇಪವನ್ನು ದಾಖಲಿಸಿದೆ ಎಂದು ವರದಿಯಾಗಿದೆ.
ಬಿಬಿಸಿ ಲೇಖನದಲ್ಲಿ, “26 ಮಂದಿಯನ್ನು ಬಲಿ ಪಡೆದ ಭಾರತೀಯ ಆಡಳಿತ ಹೊಂದಿರುವ ಕಾಶ್ಮೀರದಲ್ಲಿನ ಬಂಡುಕೋರರ ದಾಳಿಯಿಂದಾಗಿ ಭಾರತ-ಪಾಕಿಸ್ತಾನದ ಗಡಿಯಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಉಲ್ಬಣಗೊಂಡಿದ್ದು, ಈ ಸಂಬಂಧ ಭಾರತ ಕೈಗೊಂಡಿರುವ ಕ್ರಮಗಳಿಗೆ ಪ್ರತಿಯಾಗಿ, ಪಾಕಿಸ್ತಾನ ಕೂಡಾ ಮುಯ್ಯಿಗೆ ಮುಯ್ಯಿಯಂತಹ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಲಾಗಿತ್ತು.
ತನ್ನ ವರದಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಂಡುಕೋರ ದಾಳಿ ಎಂದು ಬಣ್ಣಿಸುವ ಮೂಲಕ, ಈ ದಾಳಿಯ ಗಾಂಭೀರ್ಯತೆಯನ್ನು ದುರ್ಬಲಗೊಳಿಸಲಾಗಿದೆ ಎಂದು The New York Times ಸುದ್ದಿ ಸಂಸ್ಥೆಯನ್ನು ಅಮೆರಿಕ ಸೆನೆಟ್ ತರಾಟೆಗೆ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದವರನ್ನು ಬಂಡುಕೋರರು ಹಾಗೂ ಬಂದೂಕುಧಾರಿಗಳು ಎಂದು ಕರೆಯುವ ಮೂಲಕ, ಭಯೋತ್ಪಾದಕ ದಾಳಿಯ ಗಾಂಭೀರ್ಯತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸದನ ಸಮಿತಿ ಟೀಕಿಸಿತ್ತು.