ತಮಿಳುನಾಡು | ರಾಜ್ಯಪಾಲ ರವಿಯವರ ತೀವ್ರ ಟೀಕೆಯಿಂದ ಡಿಎಂಕೆಗೆ ಹೆಚ್ಚಿನ ಬೆಂಬಲ: ಸ್ಟಾಲಿನ್

ಎಂ.ಕೆ.ಸ್ಟಾಲಿನ್ | PC : PTI
ಚೆನ್ನೈ: ಆಡಳಿತಾರೂಢ ಡಿಎಂಕೆ ಸರಕಾರದ ವಿರುದ್ಧದ ರಾಜ್ಯಪಾಲ ರವಿಯವರ ತೀವ್ರ ಟೀಕೆಯಿಂದ ಅದಕ್ಕೆ ಹೆಚ್ಚಿನ ಬೆಂಬಲವೇ ದೊರೆತಿದೆ ಎಂದು ಶುಕ್ರವಾರ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಭಿಮತ ವ್ಯಕ್ತಪಡಿಸಿದ್ದಾರೆ.
ಡಿಎಂಕೆ ಪಕ್ಷಕ್ಕೆ ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಪಕ್ಷದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, ಎನ್ಟಿಕೆ ಅಥವಾ ಅದರ ಸ್ಥಾಪಕರ ಹೆಸರನ್ನು ಉಲ್ಲೇಖಿಸದೆ, ತನ್ನ ದ್ರಾವಿಡ ಸಿದ್ಧಾಂತದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಂದ ಡಿಎಂಕೆ ಹಿಂಜರಿಯುವುದಿಲ್ಲ ಹಾಗೂ ದ್ರಾವಿಡ ಮಾದರಿ ಆಡಳಿತವನ್ನು ಮುಂದುವರಿಸುವುದಾಗಿ ಘೋಷಿಸಿದರು.
ದ್ರಾವಿಡ ಸಿದ್ಧಾಂತದ ಮುಖದಿಂದಾಗಿಯೇ ಡಿಎಂಕೆ ಬೆಳೆಯುವುದನ್ನು ಮುಂದುವರಿಸಿದ್ದು, ಸೀಮನ್ ಅವರ ಅವಹೇಳನಕಾರಿ ಟೀಕೆಗಳಿಂದಾಗಿಯೇ ಎನ್ಟಿಕೆ ಕಾರ್ಯಕರ್ತರು ಆಡಳಿತಾರೂಢ ಪಕ್ಷದ ಪರವಾಗಿ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯವಾದಿಯಾದ ಸೀಮನ್ ಹಾಗೂ ಅವರ ಪಕ್ಷವು ಡ್ರಾವಿಡ ಸಿದ್ಧಾಂತ, ದ್ರಾವಿಡ ನಾಯಕ ಇ.ವಿ.ರಾಮಸ್ವಾಮಿ ಹಾಗೂ ಡಿಎಂಕೆಯನ್ನೂ ವಿರೋಧಿಸುತ್ತಲೇ ಬಂದಿದೆ.
ರಾಜ್ಯಪಾಲ ರವಿ ಅವರು ಅನಗತ್ಯ ಕೆಲಸಗಳನ್ನು ಮಾಡುತ್ತಿರುವುದು ವಿಷಾದಕರವಾಗಿದ್ದರೂ ಹಾಗೂ ಅವರು ಆಡಳಿತಾರೂಢ ಪಕ್ಷದ ದ್ರಾವಿಡ ಸೈದ್ಧಾಂತಿಕ ನಿಲುವನ್ನು ಟೀಕಿಸುತ್ತಾ, ಧರ್ಮವನ್ನು ಪ್ರಧಾನವಾಗಿ ಬಳಸುತ್ತಿದ್ದರೂ, ಅಂತಹ ಟೀಕೆಗಳಿಂದಾಗಿಯೇ ಡಿಎಂಕೆಗೆ ಹೆಚ್ಚಿನ ಬೆಂಬಲ ದೊರೆಯುತ್ತಿದೆ ಎಂದೂ ಸ್ಟಾಲಿನ್ ಹೇಳಿದ್ದಾರೆ.