ತಮಿಳುನಾಡಿನ ವಿವಿಗಳನ್ನು ರಾಜ್ಯ ಸರಕಾರ ನಿಯಂತ್ರಿಸುತ್ತಿದೆ: ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲ ಆರ್.ಎನ್.ರವಿ ಆರೋಪ

ಎಂ.ಕೆ.ಸ್ಟಾಲಿನ್ , ಆರ್.ಎನ್.ರವಿ | PTI
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಪಾಲ ಆರ್.ಎನ್.ರವಿ ಅವರು ರಾಜ್ಯದ ವಿಶ್ವವಿದ್ಯಾನಿಲಯಗಳು ಶೋಚನೀಯವಾಗಿ ಹಣಕಾಸು ಕೊರತೆಯನ್ನು ಎದುರಿಸುತ್ತಿವೆಯೆಂದು ಕಿಡಿಕಾರಿದ್ದಾರೆ. ವಿಶ್ವವಿದ್ಯಾನಿಲಯಗಳ ಸ್ವಾಯತ್ತೆಯು ಎಷ್ಟು ತೀವ್ರವಾಗಿ ನಶಿಸುತ್ತಿದೆಯೆಂದರೆ, ವಿಶ್ವವಿದ್ಯಾನಿಲಯಗಳಲ್ಲಿ ಸಿಂಡಿಕೇಟ್ ಮಂಡಳಿಗಳು ಆಡಳಿತ ನಡೆಸುತ್ತಿಲ್ಲ ಬದಲಿಗೆ ಅವುಗಳನ್ನು ರಾಜ್ಯ ಸರಕಾರ ನಡೆಸುತ್ತಿವೆಯೆಂದವರು ಆಪಾದಿಸಿದ್ದಾರೆ.
ಶಿಕ್ಷಕರ ನೇಮಕಾತಿಗೆ ಕೂಡಾ ಹಣವಿಲ್ಲದೆ ಅವು ಒದ್ದಾಡುತ್ತಿವೆಯೆಂದು ಹೇಳಿದ್ದಾರೆ. ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ತೀರಾ ಕಳಪೆಯಾಗಿದ್ದು ಹೈಸ್ಕೂಲ್ ವಿದ್ಯಾರ್ಥಿಗಳು ಎರಡನೇ ತರಗತಿಯ ಪಠ್ಯಪುಸ್ತಕಗಳನ್ನು ಓದಲು ಅಸಮರ್ಥರಾಗಿದ್ದಾರೆಂದು ಕಳವಳ ವ್ಯಕ್ತಪಡಿಸಿದ್ದಾರೆ.
‘‘ತಮಿಳುನಾಡಿನ 20 ವಿವಿಗಳಲ್ಲಿ ಸುಮಾರು 25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಬಹುತೇಕ ವಿವಿಗಳು ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿವೆ. ಅವುಗಳ ಶೋಚನೀಯ ಪರಿಸ್ಥಿತಿಯಲ್ಲಿದ್ದು, ತಮ್ಮ ಶಿಕ್ಷಕರಿಗೆ ವೇತನವನ್ನು ಕೂಡಾ ಪಾವತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ’’ಎಂದು ರವಿ ತಿಳಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.50ಕ್ಕೂ ಅಧಿಕ ಬೋಧಕ ಹುದ್ದೆಗಳು ಖಾಲಿಯಿದೆ. ನಮ್ಮ ದೇಶದ ಹೆಮ್ಮೆಯಾಗಿರುವ ಮದ್ರಾಸ್ ವಿವಿಯಲ್ಲಿ ಶೇ.66ರಷ್ಟು ಶಿಕ್ಷಕ ಹುದ್ದೆಗಳು ಖಾಲಿಯಿವೆ. ರಾಜ್ಯದ 10 ವಿಶ್ವವಿದ್ಯಾನಿಲಯಗಳು ಹಲವಾರು ವರ್ಷಗಳಿಂದ ರಿಜಿಸ್ಟ್ರಾರ್ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಉಪಕುಲಪತಿಗಳ ನೇಮಕಕ್ಕೆ ಅವಕಾಶ ನೀಡದಿರುವ ಮೂಲಕ ಹಿಂಬಾಗಿಲಿನಿಂದ ವಿಶ್ವವಿದ್ಯಾನಿಲಯದ ಸ್ವಾಯತ್ತೆ ನಶಿಸುವಂತೆ ಮಾಡಲಾಗುತ್ತಿದೆಯೆಂದು ರವಿ ಕಿಡಿಕಾರಿದರು.
ಕುಲಪತಿಗಳ ನೇಮಕಕ್ಕೆ ಸಂಬಂಧಿಸಿ ರಾಜ್ಯಪಾಲರ ವಿರುದ್ಧ ತಮಿಳುನಾಡು ಸರಕಾರದ ಅರ್ಜಿಯ ಅಲಿಕೆಯನ್ನು ಸುಪ್ರೀಂಕೋರ್ಟ್ ನಡೆಸಲಿರುವುದಕ್ಕೆ ಮುಂಚಿತವಾಗಿ ಆರ್.ಎನ್.ರವಿ ಈ ಆರೋಪ ಮಾಡಿದ್ದಾರೆ. ವಿವಿ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ಬಿಕ್ಕಟ್ಟನ್ನು ಪರಸ್ಪರ ಬಗೆಹರಿಸಿಕೊಳ್ಳಬೇಕು ಇಲ್ಲದೆ ಇದ್ದಲ್ಲಿ ಮುಂದಿನ ವಿಚಾರಣೆ ಸಂದರ್ಭ ಮಧ್ಯಪ್ರವೇಶಿಸುವುದಾಗಿ ನ್ಯಾಯಾಲಯವು ರಾಜ್ಯಪಾಲರಿಗೆ ನಿರ್ದೇಶನ ನೀಡಿತ್ತು.
ರಾಜ್ಯದ ಶಾಲೆಗಳಲ್ಲಿನ ಪರಿಸ್ಥಿತಿ ಕೂಡಾ ಉತ್ತಮವಾಗಿಲ್ಲವೆಂದು ಹೇಳಿದ ಅವರು ಶೇ.75ರಷ್ಟು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಎರಡನೇ ದರ್ಜೆಯ ಪಠ್ಯಪುಸ್ತಕಗಳನ್ನು ಓದಲು ಅಸಮರ್ಥರಾಗಿದ್ದಾರೆ. ಅಲ್ಲದೆ 11 ಹಾಗೂ 99ರ ನಡುವಿನ ಎರಡಂಕಿಯ ಸಂಖ್ಯೆಗಳನ್ನು ಕೂಡಾ ಗುರುತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲವೆಂದು ರವಿ ಹೇಳಿದ್ದಾರೆ.
►‘ತಮಿಳುನಾಡಿನ ಹಳ್ಳಿಗಳಲ್ಲಿ ದಲಿತರಿಗೆ ಪಾದರಕ್ಷೆ ಧರಿಸಿ ಓಡಾಡಲೂ ಅವಕಾಶವಿಲ್ಲ’
ರಾಜ್ಯದ ದಲಿತರು ಸಾಮಾಜಿಕ ತಾರತಮ್ಯವನ್ನು ಎದುರಿಸುತ್ತಿದ್ದಾರೆಂದು ರವಿ ಗಣರಾಜ್ಯೋತ್ಸವ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಲ್ಲಿ ಪಾದರಕ್ಷೆಗಳನ್ನು ಧರಿಸಿಕೊಂಡು ಓಡಾಡಲು ಕೂಡಾ ಅವರಿಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಿಗೂ ಅವರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಅವರಲ್ಲಿ ಯಾರಾದರೂ ಈ ತಾರತಮ್ಯದ ವಿರುದ್ಧ ಧ್ವನಿಯೆತ್ತಿದರೆ ಅವರ ಮೇಲೆ ಬರ್ಬರವಾಗಿ ದೌರ್ಜನ್ಯವೆಸಗಲಾಗುತ್ತಿದೆ, ಮೂತ್ರ ಹೊಯ್ಯಲಾಗುತ್ತದೆ ಎಂದವರು ಆರೋಪಿಸಿದರು.
ದಲಿತ ಸಮುದಾಯಕ್ಕೆ ಸೇರಿದ ಪಂಚಾಯತ್ ಅಧ್ಯಕ್ಷರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿಲ್ಲ. ಅವರಿಗೆ ಅಧಿಕೃತ ಸಭೆಯಲ್ಲಿ ಆಸನ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತಿಲ್ಲ. ದಲಿತ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯಗಳು ತಮಿಳುನಾಡಿನಲ್ಲಿ ಸ್ಥಿರವಾಗಿ ಏರಿಕೆಯಾಗುತ್ತಲೇ ಇವೆ. ಒಂದೆಡೆ ದಲಿತರ ವಿರುದ್ಧ ಹೇಯ ಅಪರಾಧಗಳು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಸಂತ್ರಸ್ತರಿಗೆ ನ್ಯಾಯವನ್ನು ನಿರಾಕರಿಸಲಾಗುತ್ತಿದೆ ಎಂದರು.