ರಾಜ್ಯಪಾಲರು ಮಸೂದೆ ತಡೆಹಿಡಿಯಬಾರದು, ವಿಧಾನಸಭೆಗೆ ಮರಳಿಸಬೇಕು: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ |Photo: PTI
ಹೊಸದಿಲ್ಲಿ: ರಾಜ್ಯಪಾಲರು ಮಸೂದೆಗೆ ತಮ್ಮ ಸಮ್ಮತಿಯನ್ನು ತಡೆ ಹಿಡಿಯಲು ನಿರ್ಧರಿಸಿದರೆ, ಅಂತಹ ಮಸೂದೆಯನ್ನು ವಿಧಾನಸಭೆಗೆ ಮರುಪರಿಗಣನೆಗಾಗಿ ಮರಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ರಾಜ್ಯಪಾಲರು ಮಸೂದೆಗೆ ತಮ್ಮ ಸಮ್ಮತಿಯನ್ನು ತಡೆ ಹಿಡಿಯಲು ನಿರ್ಧರಿಸಿದರೆ, ಮುಂದಿನ ಕ್ರಮವೇನು ಎಂಬ ಕುರಿತು ಸಂವಿಧಾನದ ವಿಧಿ 200ರಲ್ಲಿ ಸ್ಪಷ್ಟತೆ ಇಲ್ಲದೆ ಇರುವುದರಿಂದ ಸುಪ್ರೀಂ ಕೋರ್ಟ್ ನ ಈ ಸ್ಪಷ್ಟನೆಯು ಪ್ರಾಮುಖ್ಯತೆ ಪಡೆದಿದೆ.
ಸಂವಿಧಾನದ ವಿಧಿ 200ರ ಅನ್ವಯ, ರಾಜ್ಯಪಾಲರಿಗೆ ಮೂರು ಕ್ರಮಗಳನ್ನು ಕೈಗೊಳ್ಳುವ ಆಯ್ಕೆ ಇದೆ: ಒಂದು ಸಮ್ಮತಿಯನ್ನು ನೀಡುವುದು, ಎರಡು ಸಮ್ಮತಿಯನ್ನು ತಡೆ ಹಿಡಿಯುವುದು ಅಥವಾ ಮೂರನೆಯದು ರಾಷ್ಟ್ರಪತಿಗಳ ಪರಿಗಣನೆಗೆ ರವಾನಿಸುವುದು. ವಿಧಿ 200ರಲ್ಲಿನ ಅವಕಾಶದ ಪ್ರಕಾರ, ವಿಧಾನಸಭೆಯ ಮರು ಪರಿಗಣನೆಗೆ ಅಗತ್ಯವಿರುವ ಕ್ರಮಗಳ ಸಂದೇಶದೊಂದಿಗೆ ಮಸೂದೆಯನ್ನು ರಾಜ್ಯಪಾಲರು ಮರಳಿಸಬಹುದಾಗಿದೆ. ಒಂದು ವೇಳೆ ವಿಧಾನಸಭೆಯು ತಿದ್ದುಪಡಿಯೊಂದಿಗೆ ಅಥವಾ ತಿದ್ದುಪಡಿಯಿಲ್ಲದೆ ಆ ಮಸೂದೆಯನ್ನು ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲರು ಸಮ್ಮತಿ ನೀಡಲು ಬದ್ಧರಾಗಿರುತ್ತಾರೆ.
ರಾಜ್ಯಪಾಲರೇನಾದರೂ ತಮ್ಮ ಸಮ್ಮತಿಯನ್ನು ತಡೆಹಿಡಿಯುವುದಾಗಿ ಘೋಷಿಸಿದರೆ, ಅಂತಹ ಮಸೂದೆಯನ್ನು ವಿಧಾನಸಭೆಗೆ ಮರಳಿಸಬೇಕೊ ಇಲ್ಲವೊ ಎಂಬ ಕುರಿತು ಗೊಂದಲಗಳಿದ್ದವು. ಈ ಪರಿಸ್ಥಿತಿಯು ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲರು ಹಲವಾರು ಮಸೂದೆಗಳಿಗೆ ತಮ್ಮ ಸಮ್ಮತಿಯನ್ನು ತಡೆ ಹಿಡಿಯುವ ಮೂಲಕ ವ್ಯಕ್ತವಾಗಿತ್ತು. ಆದರೆ, ರಾಜ್ಯಪಾಲರು ಆ ಮಸೂದೆಗಳನ್ನು ವಿಧಾನಸಭೆಗೆ ಮರಳಿಸಿರಲಿಲ್ಲ. ಹೀಗಾಗಿ ತಮಿಳುನಾಡು ವಿಧಾನಸಭೆಯು ಆ ಮಸೂದೆಗಳನ್ನು ಮರು ಅಂಗೀಕರಿಸಿತ್ತು.
ಮಸೂದೆಗಳ ಕುರಿತು ಕ್ರಮ ಕೈಗೊಳ್ಳುವಲ್ಲಿ ನಿಷ್ಕ್ರಿಯತೆ ಪ್ರದರ್ಶಿಸುತ್ತಿದ್ದಾರೆ ಎಂದು ತಮಿಳುನಾಡು ರಾಜ್ಯಪಾಲರ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಒಂದು ವೇಳೆ ರಾಜ್ಯಪಾಲರೇನಾದರೂ, ಮಸೂದೆಗೆ ಸಮ್ಮತಿ ನೀಡುವುದನ್ನು ತಡೆ ಹಿಡಿಯಲು ಬಯಸಿದರೆ, ಅಂತಹ ಮಸೂದೆಯನ್ನು ವಿಧಾನಸಭೆಗೆ ಮರಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಇಂತಹುದೇ ಪರಿಸ್ಥಿತಿಯ ಕಾರಣಕ್ಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕೇರಳ, ಪಂಜಾಬ್ ರಾಜ್ಯಗಳಿಗೆ ಈ ಆದೇಶದಿಂದ ನಿರಾಳವಾಗಿದೆ.