ದಕ್ಷಿಣ ಭಾರತದ ರೈತರ ಓಲೈಕೆಗೆ ಮುಂದಾದ ಸರಕಾರ: ಕೊಬ್ಬರಿಯ ಎಂಎಸ್ಪಿ ಹೆಚ್ಚಳ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ದಕ್ಷಿಣ ಭಾರತದ ರೈತರ ಓಲೈಕೆಗೆ ಮುಂದಾಗಿರುವ ಕೇಂದ್ರ ಸರಕಾರವು 2024ನೇ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯಲ್ಲಿ ಹೆಚ್ಚಳವನ್ನು ಪ್ರಕಟಿಸಿದೆ. ಏರಿಕೆಯ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.
ಕೇರಳ ಮತ್ತು ತಮಿಳುನಾಡು ಮಿಲ್ಲಿಂಗ್ ಕೊಬ್ಬರಿಯ ಪ್ರಮುಖ ಉತ್ಪಾದಕ ರಾಜ್ಯಗಳಾಗಿದ್ದರೆ ಕರ್ನಾಟಕವು ಉಂಡೆ ಕೊಬ್ಬರಿಯನ್ನು ಹೆಚ್ಚಾಗಿ ಉತ್ಪಾದಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರ ಕುರಿತ ಸಂಪುಟ ಸಮಿತಿಯು ಎಂಎಸ್ಪಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.
ಎಂಎಸ್ಪಿಯನ್ನು ಮಿಲ್ಲಿಂಗ್ ಕೊಬ್ಬರಿಗೆ ಶೇ.2.7ರಷ್ಟು ಮತ್ತು ಉಂಡೆ ಕೊಬ್ಬರಿಗೆ ಶೇ.2ರಷ್ಟು ಹೆಚ್ಚಿಸಲಾಗಿದೆ. 2022ರಲ್ಲಿ ಈ ಮಾದರಿಗಳಿಗೆ ಅನುಕ್ರಮವಾಗಿ ಶೇ.2.5 ಮತ್ತು ಶೇ.7ರಷ್ಟು ಎಂಎಸ್ಪಿಯನ್ನು ಹೆಚ್ಚಿಸಲಾಗಿತ್ತು.
ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆಯನ್ನು ತೆಗೆಯಲು ಬಳಸಲಾಗುತ್ತದೆ ಮತ್ತು ಉಂಡೆ ಕೊಬ್ಬರಿಯನ್ನು ಡ್ರೈ ಫ್ರುಟ್ ಆಗಿ ಸೇವಿಸಲಾಗುತ್ತದೆ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಸರಕಾರವು 2024ರ ಹಂಗಾಮಿಗಾಗಿ ಎಂಎಸ್ಪಿಯನ್ನು ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಲ್ಗೆ 300 ರೂ.ಹೆಚ್ಚಿಸಿ 11,160 ರೂ.ಗೆ ಮತ್ತು ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಲ್ಗೆ 250 ರೂ.ಹೆಚ್ಚಿಸಿ 12,000 ರೂ.ಗೆ ನಿಗದಿಗೊಳಿಸಿದೆ. ಒಟ್ಟಾರೆ ಏರಿಕೆಯು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟಿನಷ್ಟಾಗಿದೆ ಎಂದು ಸರಕಾರವು ಹೇಳಿದೆ.
ಕಳೆದ 10 ವರ್ಷಗಳಲ್ಲಿ ಕೊಬ್ಬರಿಯ ಎಂಎಸ್ಪಿ ಎರಡು ಪಟ್ಟಿಗೂ ಹೆಚ್ಚಾಗಿದೆ. 2014-15ರಲ್ಲಿ ಮಿಲ್ಲಿಂಗ್ ಮತ್ತು ಉಂಡೆ ಕೊಬ್ಬರಿಗೆ ಎಂಎಸ್ಪಿ ಪ್ರತಿ ಕ್ವಿಂಟಲ್ ಗೆ ಅನುಕ್ರಮವಾಗಿ 5,250 ರು.ಮತ್ತು 5,500 ರೂ.ಆಗಿದ್ದರೆ,2023-24ಕ್ಕೆ ಇದು 11,600 ರೂ.(ಶೇ.113 ಏರಿಕೆ) ಮತ್ತು 12,000 (ಶೇ.118 ಏರಿಕೆ) ರೂ.ಆಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಸುದ್ದಿಗಾರರಿಗೆ ತಿಳಿಸಿದರು.