ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಕೇಂದ್ರ ಸರಕಾರ ಕಾನೂನು ಆಯೋಗದ ಸಲಹೆಯನ್ನು ಪಡೆಯಬೇಕಿತ್ತು: ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ (PTI)
ಚೆನ್ನೈ: ಐಪಿಸಿ, ಸಿಪಿಸಿ ಮತ್ತು ಪುರಾವೆ ಕಾಯಿದೆಯ ಬದಲಿಗೆ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರ ಕನಿಷ್ಠ ಕಾನೂನು ಆಯೋಗದ ಸಲಹೆಯನ್ನಾದರೂ ಪಡೆದುಕೊಳ್ಳಬೇಕಿತ್ತು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಈ ಹೊಸ ಕಾನೂನುಗಳನ್ನು “ಅಸಂವಿಧಾನಿಕ” ಎಂದು ಘೋಷಿಸಬೇಕೆಂದು ಕೋರಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
“ಕಾನೂನು ಆಯೋಗ ಈ ಉದ್ದೇಶಕ್ಕಾಗಿಯೇ ಇದೆ (ಸರ್ಕಾರಕ್ಕೆ ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡಲು,” ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಸುಂದರ್ ಮತ್ತು ಎನ್ ಸೆಂಥಿಲ್ ಕುಮಾರ್ ಅವರ ಪೀಠ ಹೇಳಿದೆ.
ಮೂಲ ಮೂರು ಕಾನೂನುಗಳನ್ನು ಕೇಂದ್ರ ಏಕೆ ಬದಲಿಸಲು ಬಯಸಿತ್ತು, ಹಿಂದಿನ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಬಹುದಾಗಿತ್ತು, ಕೇಂದ್ರದ ಕ್ರಮದ ಹಿಂದಿನ ಉದ್ದೇಶ ಒಳ್ಳೆಯದಾಗಿರಬಹುದು. ಆದರೆ ಅದರಿಂದ ಉಂಟಾಗಬಹುದಾದ ವಿಳಂಬದ ಕುರಿತು ನಮಗೆ ಕಳವಳವಿದೆ,” ಎಂದು ನ್ಯಾಯಪೀಠ ಹೇಳಿತು.
ಸಂಸತ್ತು ಯಾವುದೇ ಅರ್ಥಪೂರ್ಣ ಚರ್ಚೆಗಳಿಲ್ಲದೆ ಈ ಮೂರು ಹೊಸ ಕಾನೂನುಗಳಿಗೆ ಅಂಗೀಕಾರ ನೀಡಿದೆ ಎಂದು ಭಾರತಿ ಪರ ಹಾಜರಿದ್ದ ಹಿರಿಯ ವಕೀಲ ಎನ್ ಆರ್ ಎಲಂಗೊ ಹೇಳಿದರು.