ಕೇಜ್ರಿವಾಲ್ ಬಂಧನದ ಬಳಿಕ ಸರಕಾರವು ಸ್ಥಗಿತಗೊಂಡಿದೆ : ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ : ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನದ ಬಳಿಕ ದಿಲ್ಲಿ ಸರಕಾರವು ಸ್ಥಗಿತಗೊಂಡಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಹೇಳಿತು.
ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ಅಧೀನದ ಶಾಲೆಗಳ ಸ್ಥಿತಿ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯವು,ದಿಲ್ಲಿಯಂತಹ ರಾಜಧಾನಿ ನಗರದಲ್ಲಿ ಮುಖ್ಯಮಂತ್ರಿ ಹುದ್ದೆಯು ಅಲಂಕಾರಿಕವಲ್ಲ ಮತ್ತು ಆ ಹುದ್ದೆಯಲ್ಲಿರುವವರು 24/7 ಕಾಲ ಲಭ್ಯರಿರಬೇಕು. ಅವರ ಅನುಪಸ್ಥಿತಿಯು ಮಕ್ಕಳನ್ನು ಅವರ ಉಚಿತ ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು ಮತ್ತು ಸಮವಸ್ತ್ರಗಳಿಂದ ವಂಚಿತರನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಈ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ದೀರ್ಘಾವಧಿಯವರೆಗೆ ಅಥವಾ ಅನಿರ್ದಿಷ್ಟಾವಧಿಗೆ ಅಜ್ಞಾತ ಅಥವಾ ಗೈರುಹಾಜರಾಗಿರಬಾರದು ಎನ್ನುವುದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಅಗತ್ಯವಾಗಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ ಮತ್ತು ನ್ಯಾ.ಮನಮೀತ್ ಪ್ರೀತಂ ಸಿಂಗ್ ಅರೋರಾ ಅವರ ಪೀಠವು ಹೇಳಿತು.
ಎಂಸಿಡಿ ಆಯುಕ್ತರ ಹಣಕಾಸು ಅಧಿಕಾರದಲ್ಲಿ ಯಾವುದೇ ಹೆಚ್ಚಳಕ್ಕೆ ಕೇಜ್ರಿವಾಲ್ ಅವರ ಅನುಮೋದನೆಯು ಅಗತ್ಯವಾಗಿದೆ ಎಂದು ದಿಲ್ಲಿಯ ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ಅವರು ಒಪ್ಪಿಕೊಂಡಿರುವುದು ಮುಖ್ಯಮಂತ್ರಿಗಳ ಬಂಧನದ ಬಳಿಕ ದಿಲ್ಲಿ ಸರಕಾರವು ಸ್ಥಗಿತಗೊಂಡಿದೆ ಎಂದು ಒಪ್ಪಿಕೊಂಡಂತಾಗಿದೆ ಎಂದೂ ಪೀಠವು ಹೇಳಿತು.
ಆಡಳಿತಾತ್ಮಕ ಅಡೆತಡೆಗಳಿಂದಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಪ್ರಾಥಮಿಕ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯು ಪ್ರತಿಪಾದಿಸಿದೆ.
ಎ.26ರಂದು ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ಪಠ್ಯಪುಸ್ತಕಗಳನ್ನು ಒದಗಿಸುವಲ್ಲಿ ವೈಫಲ್ಯಕ್ಕಾಗಿ ಕೇಜ್ರಿವಾಲ್, ದಿಲ್ಲಿ ಸರಕಾರ ಮತ್ತು ಎಂಸಿಡಿಯನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನದ ಬಳಿಕವೂ ಕೇಜ್ರಿವಾಲ್ ಹುದ್ದೆಯನ್ನು ತೊರೆಯದೆ ರಾಷ್ಟ್ರೀಯ ಹಿತಾಸಕ್ತಿಗಿಂತ ತನ್ನ ರಾಜಕೀಯ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅದು ಕುಟುಕಿತ್ತು.
ಉಚ್ಚ ನ್ಯಾಯಾಲಯದ ಚಾಟಿಯೇಟಿನ ಬಳಿಕ ಲೆಫ್ಟಿನಂಟ್ ಗವರ್ನರ್ ಅವರ ಕಚೇರಿಯು ಆಪ್ ನೇತೃತ್ವದ ದಿಲ್ಲಿ ಸರಕಾರ ಮತ್ತು ಸೌರಭ ಭಾರದ್ವಾಜ್ ಎಂಸಿಡಿ ಆಯುಕ್ತರ ಹಣಕಾಸು ಅಧಿಕಾರವನ್ನು 5 ಕೋಟಿ ರೂ.ಗಳಿಂದ 50 ಕೋಟಿ ರೂ.ಗೆ ತಾತ್ಕಾಲಿಕವಾಗಿ ಹೆಚ್ಚಿಸುವ ಪ್ರಸ್ತಾವಕ್ಕೆ ಅನುಮೋದನೆಯನ್ನು ವಿಳಂಬಿಸುತ್ತಿದ್ದಾರೆ ಎಂದು ಆರೋಪಿಸಿತ್ತು.
ಒಂದು ವರ್ಷಕ್ಕೂ ಅಧಿಕ ಕಾಲದಿಂದ ಎಂಸಿಡಿಯ ಸ್ಥಾಯಿ ಸಮಿತಿಯ ರಚನೆಯಾಗಿಲ್ಲ, ವಿಳಂಬದಿಂದಾಗಿ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಯೋಜನೆಗಳಿಗೆ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ವಾದಿಸಿದ್ದಾರೆ.