ಭವಿಷ್ಯದ ಪೀಳಿಗೆಯ ಮೇಲೆ ಸಾಲದ ಹೊರೆ ಬೀಳದಂತೆ ಸರ್ಕಾರವು ಖಾತ್ರಿಗೊಳಿಸಲಿದೆ: ಹಣಕಾಸು ಸಚಿವೆ
Photo: twitter/nsitharamanoffc
ಹೊಸದಿಲ್ಲಿ: ವಿತ್ತೀಯ ಕೊರತೆ ನಿರ್ವಹಣೆಯ ಬಗ್ಗೆ ಸರ್ಕಾರವು ಎಚ್ಚರಿಕೆಯಿಂದಿದ್ದು, ಭವಿಷ್ಯದ ಪೀಳಿಗೆಯ ಮೇಲೆ ಸಾಲದ ಹೊರೆಯು ಬೀಳದಂತೆ ಖಾತ್ರಿಗೊಳಿಸಲಾಗುವುದು ಎಂದು ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೌಟಿಲ್ಯ ಆರ್ಥಿಕ ಸಮ್ಮೇಳನ 2023 ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಒಟ್ಟಾರೆ ಸಾಲವನ್ನು ಹೇಗೆ ತಗ್ಗಿಸಬಹುದು ಎಂಬುದರತ್ತ ಸರ್ಕಾರವು ಗಮನ ಹರಿಸಿದೆ ಎಂದು ಹೇಳಿದ್ದಾರೆ.
“ದೇಶದ ದೊಡ್ಡ ಆರ್ಥಿಕತೆಗೆ ಸಂಬಂಧಿಸಿದ ವಿಚಾರಗಳ ಸ್ಥಿರತೆಯ ಬಗ್ಗೆ ನಾವು ಎಚ್ಚರಿಕೆಯಿಂದಿದ್ದು, ನಮ್ಮ ಆರ್ಥಿಕತೆಯನ್ನು ನಿಭಾಯಿಸುವ ಕುರಿತು ಹೊಣೆಗಾರಿಕೆ ಹೊಂದಿದ್ದೇವೆ. ಇದರೊಂದಿಗೆ ಹಣಕಾಸು ನಿರ್ವಹಣೆ ನಿಭಾಯಿಸುವುದರ ಕುರಿತೂ ಹೊಣೆಗಾರಿಕೆ ಹೊಂದಿದ್ದೇವೆ. ಹೀಗಾಗಿ ಇಲ್ಲಿಯವರೆಗೆ ನಾವು ತೆಗೆದುಕೊಂಡಿರುವ ಪ್ರತಿ ನಿರ್ಧಾರದಲ್ಲೂ ಭವಿಷ್ಯದ ಪೀಳಿಗೆಗಳ ಮೇಲೆ ಹೊರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ” ಎಂದು ತಿಳಿಸಿದ್ದಾರೆ.
ನೀವು ಅಧಿಕಾರದಲ್ಲಿದ್ದಾಗ ದುಂದು ವೆಚ್ಚ ಮಾಡಿ, ಭವಿಷ್ಯದ ಪೀಳಿಗೆಯ ಮೇಲೆ ಹೊರೆ ಹೊರಿಸುವುದು ತುಂಬಾ ಸುಲಭ ಎಂದು ಅವರು ಹೇಳಿದ್ದಾರೆ.
“ನಾವು ಭಾರತ ಸರ್ಕಾರದ ಸಾಲದ ಹೊರೆಯ ಬಗ್ಗೆ ಎಚ್ಚರಿಕೆಯಿಂದಿದ್ದೇವೆ. ಹಿಂದಿನ ಹಲವಾರು ಮಂದಿಗೆ ಹೋಲಿಸಿದರೆ, ಅವರಿಗಿಂತ ಹೆಚ್ಚಿಲ್ಲ. ಹೀಗಿದ್ದೂ, ವಿಶ್ವದ ವಿವಿಧ ಭಾಗದಲ್ಲಿ ನಡೆಯುತ್ತಿರುವ ಪ್ರಯೋಗಗಳತ್ತ ನಾವು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.