ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಹೆಸರುಗಳ ಕುರಿತು ಭಿನ್ನಾಭಿಪ್ರಾಯಗಳ ನಡುವೆಯೇ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಮರುನಾಮಕರಣ ಮಾಡದಂತೆ ಸರಕಾರವು ರಾಜ್ಯಗಳಿಗೆ ಸೂಚಿಸಿದೆ. ‘ಪ್ರಧಾನ ಮಂತ್ರಿ’ ಅಥವಾ ‘ಪ್ರೈಮ್ ಮಿನಿಸ್ಟರ್’ ನಿಂದ ಆರಂಭಗೊಳ್ಳುವ 15 ಯೋಜನೆಗಳು ಇವುಗಳಲ್ಲಿ ಸೇರಿವೆ ಎಂದು telegraphindia.com ವರದಿ ಮಾಡಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಹೆಸರುಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿವೆ. ಪಶ್ಚಿಮ ಬಂಗಾಳ ಅವುಗಳ ಹೆಸರುಗಳನ್ನು ಬದಲಿಸಲೂ ಪ್ರಯತ್ನಿಸುವ ಮೂಲಕ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿತ್ತು.
ಡಿ.2ರಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಹಾಯಕ (ಸ್ವತಂತ್ರ ಹೊಣೆಗಾರಿಕೆ) ಅಂಕಿಅಂಶಗಳು ಮತ್ತು ಕಾರ್ಯಕ್ರಮ ಜಾರಿ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ, ಆಯುಷ್ಮಾನ ಭಾರತ-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ, ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ, ಪ್ರಧಾನ ಮಂತ್ರಿ ಆವಾಸ್ ಯೋಜನಾ ಸೇರಿದಂತೆ ‘ಪ್ರಧಾನ ಮಂತ್ರಿ’ ಅಥವಾ ‘ಪ್ರೈಮ್ ಮಿನಿಸ್ಟರ್’ ನಿಂದ ಆರಂಭಗೊಳ್ಳುವ 15 ಯೋಜನೆಗಳನ್ನು ಪಟ್ಟಿ ಮಾಡಿದ್ದರು.
ಯೋಜನೆಗಳನ್ನು ಆಯಾ ಕೇಂದ್ರ ಸಚಿವಾಲಯಗಳು ಅಥವಾ ಇಲಾಖೆಗಳು ಮತ್ತು ರಾಜ್ಯಗಳು ಜಂಟಿಯಾಗಿ ಅನುಷ್ಠಾನಿಸುತ್ತವೆ. ಯೋಜನೆಗಳ ವೆಚ್ಚವನ್ನು ಕೇಂದ್ರ ಮತ್ತು ಪ.ಬಂಗಾಳ ಸೇರಿದಂತೆ ಹೆಚ್ಚಿನ ರಾಜ್ಯಗಳು 60:40ರ ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಈ ಅನುಪಾತ 90:10ರಷ್ಟಿದೆ.
ಆಪ್ನ ರಾಜ್ಯಸಭಾ ಸದಸ್ಯ ಸಂದೀಪ್ ಕುಮಾರ್ ಪಾಠಕ್ ಅವರು, ಇಂತಹ ಯೋಜನೆಗಳಿಗೆ ಮರುನಾಮಕರಣ ಮಾಡದಿರುವುದನ್ನು ರಾಜ್ಯಗಳಿಗೆ ಕಡ್ಡಾಯಗೊಳಿಸಿರುವ ಕಾನೂನು ಮತ್ತು ಹೆಸರುಗಳನ್ನು ಮಾರ್ಪಡಿಸಿದ ಸಂದರ್ಭದಲ್ಲಿ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಲು ಕೇಂದ್ರಕ್ಕೆ ಅವಕಾಶ ನೀಡುವ ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು.
ನಾಮಕರಣ, ನಿಧಿ ಹಂಚಿಕೆ ವಿಧಾನ, ಬಳಕೆ ಇತ್ಯಾದಿ ಸೇರಿದಂತೆ ಪ್ರತಿ ಕೇಂದ್ರ ಪ್ರಾಯೋಜಿತ ಯೋಜನೆಯ ಕಾರ್ಯತಂತ್ರವು ಅದಕ್ಕಾಗಿ ಸಂಬಂಧಿತ ಸಚಿವಾಲಯಗಳು/ಇಲಾಖೆಗಳು ಕಾಲ ಕಾಲಕ್ಕೆ ರೂಪಿಸುವ ಮಾರ್ಗಸೂಚಿಗಳನ್ನು ಅವಲಂಬಿಸಿರುತ್ತದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಮಾರ್ಗಸೂಚಿಗಳನ್ನು ಪಾಲಿಸುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮಗಳು ಮತ್ತು ಯೋಜನೆಗಳಿಗೆ ಮರುನಾಮಕರಣವನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ(ಪಿಎಂಜಿಎಸ್ವೈ) ಮತ್ತು ಪಿಎಂ ಆವಾಸ್ ಯೋಜನಾ-ಗ್ರಾಮೀಣದಡಿ ಪ.ಬಂಗಾಳಕ್ಕೆ ಎರಡು ವರ್ಷಗಳ ಕಾಲ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಿತ್ತು. ಪಿಎಂಜಿಎಸ್ವೈ ರಸ್ತೆಗಳಲ್ಲಿ ‘ಬಾಂಗ್ಲಾ ಗ್ರಾಮ ಸಡಕ್ ಯೋಜನಾ’ ಎಂಬ ಸೂಚನಾ ಫಲಕಗಳನ್ನು ಅಳವಡಿಸಿದ್ದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆಕ್ಷೇಪಿಸಿತ್ತು.
ಪ್ರಧಾನ ಮಂತ್ರಿಗಳು ‘ವೈಯಕ್ತಿಕವಾಗಿ ನಿಧಿಗಳು ಮತ್ತು ಪ್ರಯೋಜನಗಳನ್ನು’ ನೀಡುತ್ತಿದ್ದಾರೆ ಎಂದು ಸೂಚಿಸಲು ಹೆಚ್ಚುಕಡಿಮೆ ಪ್ರತಿಯೊಂದೂ ಯೋಜನೆಗೆ ‘ಪಿಎಂ ಯೋಜನೆ’ ಎಂದು ನಾಮಕರಣ ಮಾಡುವ ಸಂಪ್ರದಾಯ ಹಿಂದೆಂದೂ ಇರಲಿಲ್ಲ ಎಂದು ಹೇಳಿದ ಮಾಜಿ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್ ಅವರು,ಯುಪಿಎ ಆಡಳಿತದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ ಮಹಾತ್ಮಾಜಿ, ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರಂತಹ ಹುತಾತ್ಮ ನಾಯಕರ ಗೌರವಾರ್ಥ ಅವರ ಹೆಸರಿನಲ್ಲಿ ಕೆಲವು ಯೋಜನೆಗಳಿದ್ದವು. ಆದರೆ ಇಂದಿರಾ ಆವಾಸ್ ಯೋಜನೆಯು ಪಿಎಂ ಆವಾಸ್ ಯೋಜನಾ ಆದಂತೆ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಮರುಬ್ರ್ಯಾಂಡ್ ಮಾಡುವ ಮೂಲಕ ಪ್ರತಿಯೊಂದನ್ನೂ ಜೀವಂತ ಪ್ರಧಾನಿಯೊಂದಿಗೆ ಹೆಸರಿಸುವುದು ಕೀಳುಮಟ್ಟದ್ದಾಗಿದೆ ಎಂದರು.