ಸಂಸತ್ತಿನ ಕುರಿತು ಸರಕಾರದ ವರ್ತನೆ ನಿರಂಕುಶ ಮತ್ತು ದುರಹಂಕಾರದಿಂದ ಕೂಡಿದೆ: ಮಲ್ಲಿಕಾರ್ಜುನ ಖರ್ಗೆ ಆರೋಪ
ಮಲ್ಲಿಕಾರ್ಜುನ ಖರ್ಗೆ | Photo: ANI
ಹೊಸದಿಲ್ಲಿ: ಸಂಸತ್ತಿನ ಕುರಿತು ಸರಕಾರದ ವರ್ತನೆಯು ನಿರಂಕುಶವಾಗಿದೆ ಮತ್ತು ದುರಹಂಕಾರದಿಂದ ಕೂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಧನ್ಕರ್ ತನಗೆ ಶನಿವಾರ ಬರೆದಿದ್ದ ಪತ್ರಕ್ಕೆ ಖರ್ಗೆ ಉತ್ತರಿಸಿದ್ದಾರೆ. ಭಾರತೀಯ ನ್ಯಾಯ (ದ್ವಿತೀಯ) ಸಂಹಿತೆ,ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ (ದ್ವಿತೀಯ) ಮಸೂದೆ ಮೇಲಿನ ಚರ್ಚೆಗಳಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸದೆ ಪ್ರತಿಪಕ್ಷಗಳು ‘ಜೀವಮಾನದ ಅವಕಾಶವನ್ನು’ ಕಳೆದುಕೊಂಡಿವೆ ಎಂದು ಧನ್ಕರ್ ತನ್ನ ಪತ್ರದಲ್ಲಿ ಹೇಳಿದ್ದರು.
ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಉದ್ದೇಶಪೂರ್ವಕ ಅಶಿಸ್ತಿಗಾಗಿ ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದೂ ಧನ್ಕರ್ ತನ್ನ ಪತ್ರದಲ್ಲಿ ಪ್ರತಿಪಾದಿಸಿದ್ದರು.
ಪ್ರತಿಪಕ್ಷಗಳ ಸದಸ್ಯರ ಸಾಮೂಹಿಕ ಅಮಾನತು ಸರಕಾರದಿಂದ ಪೂರ್ವನಿರ್ಧರಿತ ಮತ್ತು ಪೂರ್ವಯೋಜಿತವಾಗಿತ್ತು, ಸಂಪೂರ್ಣ ವಿವೇಚನಾರಹಿತವಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.
ಸಭಾಪತಿಗಳು ಸದನದ ಪಾಲಕರಾಗಿದ್ದಾರೆ. ಸದನದ ಘನತೆಯನ್ನು ಎತ್ತಿಹಿಡಿಯುವಲ್ಲಿ, ಸಂಸದೀಯ ವಿಶೇಷಾಧಿಕಾರಗಳನ್ನು ಹಾಗೂ ಸಂಸತ್ತಿನಲ್ಲಿ ಚರ್ಚೆಗಳು ಮತ್ತು ಉತ್ತರಗಳ ಮೂಲಕ ಸರಕಾರವನ್ನು ಹೊಣೆಯಾಗಿಸುವ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರು ಮುಂಚೂಣಿಯಲ್ಲಿರಬೇಕು ಎಂದು ಧನ್ಕರ್ ಗೆ ಬರೆದಿರುವ ಪತ್ರದಲ್ಲಿ ಹೇಳಿರುವ ಖರ್ಗೆ, ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಿದ್ದಕ್ಕಾಗಿ ಮತ್ತು ಸರಕಾರದಿಂದ ಉತ್ತರದಾಯಿತ್ವವನ್ನು ಕೋರದ್ದಕ್ಕಾಗಿ ಇತಿಹಾಸವು ಸದನಗಳ ಅಧ್ಯಕ್ಷರ ವಿರುದ್ಧ ಕಠೋರ ನಿರ್ಣಯವನ್ನು ತೆಗೆದುಕೊಂಡಾಗ ಅದು ನೋವನ್ನುಂಟು ಮಾಡುತ್ತದೆ ಎಂದಿದ್ದಾರೆ.
ಧನ್ಕರ್ ಅವರು ಖರ್ಗೆಯವರಿಗೆ ಬರೆದಿದ್ದ ಪತ್ರದಲ್ಲಿ ಸೋಮವಾರ ಸಂಜೆ ನಾಲ್ಕು ಗಂಟೆಗೆ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ತಾನು ದಿಲ್ಲಿಯಲ್ಲಿ ಇರುವುದಿಲ್ಲ ಮತ್ತು ಮರಳಿದ ಮೇಲಷ್ಟೇ ಭೇಟಿಯಾಗಲು ಸಾಧ್ಯ ಎಂದು ಖರ್ಗೆ ತಿಳಿಸಿದ್ದಾರೆ.