ಫೆಬ್ರವರಿಯಲ್ಲಿ 1.84 ಲಕ್ಷ ಕೋಟಿ ರೂ.ತಲುಪಿದ ಜಿಎಸ್ಟಿ ಸಂಗ್ರಹ
ಶೇ.9ರಷ್ಟು ಏರಿಕೆ, ಆರ್ಥಿಕ ಪುನಃಶ್ಚೇತನದ ಸೂಚನೆ: ತಜ್ಞರು

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ದೇಶಿಯ ಬಳಕೆಯಲ್ಲಿ ಹೆಚ್ಚಳದಿಂದಾಗಿ ಫೆಬ್ರವರಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ ಶೇ.9.1ರಷ್ಟು ಏರಿಕೆಯಾಗಿದ್ದು 1.84 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಆರ್ಥಿಕ ಪುನಃಶ್ಚೇತನದ ಮುನ್ಸೂಚನೆಯಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಶನಿವಾರ ಬಿಡುಗಡೆಗೊಂಡ ಅಧಿಕೃತ ದತ್ತಾಂಶಗಳ ಪ್ರಕಾರ 35,205 ಕೋ.ರೂ.ಕೇಂದ್ರ ಜಿಎಸ್ಟಿ, 43,704 ಕೋ.ರೂ. ರಾಜ್ಯ ಜಿಎಸ್ಟಿ, 90,870 ಕೋ.ರೂ.ಏಕೀಕೃತ ಜಿಎಸ್ಟಿ ಮತ್ತು 13,868 ಕೋ.ರೂ.ಪರಿಹಾರ ಸೆಸ್ ರೂಪದಲ್ಲಿ ಸಂಗ್ರಹಗೊಂಡಿವೆ.
ಫೆಬ್ರವರಿ ತಿಂಗಳಲ್ಲಿ ದೇಶಿಯ ವಹಿವಾಟುಗಳಿಂದ ಜಿಎಸ್ಟಿ ಆದಾಯಗಳಲ್ಲಿ ಶೇ.10.2ರಷ್ಟು ಏರಿಕೆಯಾಗಿದ್ದು, 1.42 ಲಕ್ಷ ಕೋಟಿ ರೂ.ಗೆ ತಲುಪಿದ್ದರೆ ಆಮದುಗಳಿಂದ ಜಿಎಸ್ಟಿ ಆದಾಯಗಳಲ್ಲಿ ಶೇ.5.4ರಷ್ಟು ಏರಿಕೆಯಾಗಿದ್ದು,42,702 ಕೋ.ರೂ.ಗೆ ತಲುಪಿದೆ.
ಈ ಅವಧಿಯಲ್ಲಿ ಒಟ್ಟು ಮರುಪಾವತಿಗಳ ಮೊತ್ತ 20,889 ಕೋ.ರೂ.ಆಗಿದ್ದು,2024ರ ಫೆಬ್ರವರಿಗೆ ಹೋಲಿಸಿದರೆ ಶೇ.17.3ರಷ್ಟು ಹೆಚ್ಚಳವಾಗಿದೆ. ನಿವ್ವಳ ಜಿಎಸ್ಟಿ ಸಂಗ್ರಹವು ಶೇ.8.1ರಷ್ಟು ಹೆಚ್ಚಳದೊಂದಿಗೆ 1.63 ಲಕ್ಷ ಕೋಟಿ ರೂ.ಗೆ ತಲುಪಿದೆ.
2024 ಫೆಬ್ರವರಿಯಲ್ಲಿ ಒಟ್ಟು ಮತ್ತು ನಿವ್ವಳ ಜಿಎಸ್ಟಿ ಸಂಗ್ರಹ ಅನುಕ್ರಮವಾಗಿ 1.68 ಲಕ್ಷ ಕೋಟಿ ರೂ. ಮತ್ತು 1.5 ಲಕ್ಷ ಕೋಟಿ ರೂ. ಆಗಿತ್ತು.
2025,ಫೆಬ್ರವರಿಯಲ್ಲಿ 1.84 ಲಕ್ಷ ಕೋಟಿ ರೂ.ಗಳ ಒಟ್ಟು ಜಿಎಸ್ಟಿ ಸಂಗ್ರಹವು 2025,ಜನವರಿಯಲ್ಲಿ ಸಂಗ್ರಹವಾಗಿದ್ದ 1.96 ಲಕ್ಷ ರೂ.ಗಿಂತ ಕಡಿಮೆಯೇ ಇದೆ.
ಸದೃಢ ಜಿಎಸ್ಟಿ ಸಂಗ್ರಹ ಅಂಕಿಅಂಶಗಳು ಭಾರತೀಯ ಆರ್ಥಿಕತೆಯು ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ ಎನ್ನುವುದನ್ನು ಸೂಚಿಸಿವೆ ಎಂದು ಹೇಳಿದ ಇವೈ ಟ್ಯಾಕ್ಸ್ನ ಪಾಲುದಾರ ಸೌರಭ ಅಗರವಾಲ್, ಆಮದು ಸಂಬಂಧಿತ ಸಂಗ್ರಹಗಳಿಗೆ ಹೋಲಿಸಿದರೆ ದೇಶಿಯ ಜಿಎಸ್ಟಿ ಆದಾಯದಲ್ಲಿ ಸ್ಥಿರವಾದ ಏರಿಕೆಯು ಆತ್ಮನಿರ್ಭರ ಭಾರತ ನೀತಿಗಳ ಪರಿಣಾಮಕಾರಿ ಅನುಷ್ಠಾನವನ್ನು ಸೂಚಿಸುತ್ತಿದೆ ಎಂದು ತಿಳಿಸಿದರು.
ದೇಶಿಯ ಪೂರೈಕೆಗಳ ಮೇಲಿನ ಜಿಎಸ್ಟಿ ಸಂಗ್ರಹಗಳಲ್ಲಿ ಶೇ.10.2ರಷ್ಟು ಏರಿಕೆ ಮತ್ತು ಶೇ.9.1ರ ಒಟ್ಟಾರೆ ಬೆಳವಣಿಗೆಯು ಚತುರ್ಥ ತೈಮಾಸಿಕದಲ್ಲಿ ಆರ್ಥಿಕತೆಯ ಸಂಭಾವ್ಯ ಪುನಃಶ್ಚೇತನವನ್ನು ಸೂಚಿಸುತ್ತಿವೆ. ಮಹಾ ಕುಂಭಮೇಳದಿಂದಾಗಿ ಆರ್ಥಿಕ ಪರಿಣಾಮಗಳು ಕಾರ್ಯಗತಗೊಂಡರೆ ಮುಂದಿನ ತಿಂಗಳಲ್ಲಿ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು ಎಂದು ಕೆಪಿಎಂಜಿಯ ಪರೋಕ್ಷ ತೆರಿಗೆ ಮುಖ್ಯಸ್ಥ ಮತ್ತು ಪಾಲುದಾರ ಅಭಿಷೇಕ ಜೈನ್ ಹೇಳಿದರು.
ಹರ್ಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ಕರ್ನಾಟಕದಂತಹ ಬೃಹತ್ ತಯಾರಿಕೆ ಮತ್ತು ಬಳಕೆ ರಾಜ್ಯಗಳಲ್ಲಿ ಜಿಎಸ್ಟಿ ಸಂಗ್ರಹಗಳು ಶೇ.10ರಿಂದ ಶೇ.20ರಷ್ಟು ಉತ್ತಮ ಬೆಳವಣಿಗೆಯನ್ನು ಪ್ರದರ್ಶಿಸಿವೆ. ಶೇ.1ರಿಂದ ಶೇ.4ರಷ್ಟು ಏರಿಕೆಯನ್ನು ದಾಖಲಿಸಿರುವ ತೆಲಂಗಾಣ, ಗುಜರಾತ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಕಡಿಮೆ ಬೆಳವಣಿಗೆಗೆ ಕಾರಣಗಳ ವಿವರವಾದ ಮೌಲ್ಯಮಾಪನವು ಜಿಎಸ್ಟಿ ಸಂಗ್ರಹದಲ್ಲಿ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್.ಮಣಿ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ(ಎಪ್ರಿಲ್-ಫೆಬ್ರವರಿ) ಒಟ್ಟು ಜಿಎಸ್ಟಿ ಸಂಗ್ರಹ ಶೇ.9.4ರಷ್ಟು ಏರಿಕೆಯೊಂದಿಗೆ 20.13 ಲಕ್ಷ ಕೋಟಿ ರೂ.ಗಳಾಗಿದ್ದರೆ, ನಿವ್ವಳ ಜಿಎಸ್ಟಿ ಸಂಗ್ರಹ ಶೇ.8.6ರಷ್ಟು ಏರಿಕೆಯೊಂದಿಗೆ 17.79 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.