ಡಿ. 21ರಂದು ಜೈಸಲ್ಮೇರ್ ನಲ್ಲಿ ಸಭೆ ಸೇರಲಿರುವ ಜಿಎಸ್ಟಿ ಮಂಡಳಿ : ವಿಮಾ ಶುಲ್ಕ, ತೆರಿಗೆ ದರ ಸುಧಾರಣೆ ನಿರ್ಧಾರ ಸಾಧ್ಯತೆ
GST Council meet.| Credit: PTI Photo
ಹೊಸದಿಲ್ಲಿ: ಡಿಸೆಂಬರ್ 21ರಂದು ಜೈಸಲ್ಮೇರ್ ನಲ್ಲಿ ಜಿಎಸ್ಟಿ ಮಂಡಳಿ ಸಭೆ ಸೇರಲಿದ್ದು, ಆರೋಗ್ಯ ಮತ್ತು ಜೀವ ವಿಮೆಗಳ ಮೇಲಿನ ಜಿಎಸ್ಟಿ ದರಕ್ಕೆ ವಿನಾಯತಿ ನೀಡುವ ಅಥವಾ ಕಡಿತಗೊಳಿಸುವ ಬಹು ನಿರೀಕ್ಷಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯ ಸಚಿವರ ಸಮಿತಿಯು ಮಾಡಿರುವ ಶಿಫಾರಸಿನನ್ವಯ ಕೆಲವು ತೆರಿಗೆ ದರದ ಸುಧಾರಣೆ ಹಾಗೂ ಸಾಮಾನ್ಯ ಜನರು ಬಳಸುವ ಕೆಲ ಅಗತ್ಯ ವಸ್ತುಗಳ ಮೇಲಿನ ತೆರಿಗೆ ದರವನ್ನು ಶೇ. 12ರಿಂದ ಶೇ. 5 ತೆರಿಗೆ ಪ್ರವರ್ಗಕ್ಕೆ ಸೇರಿಸುವ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜಿಎಸ್ಟಿ ಮಂಡಳಿ, “ಜಿಎಸ್ಟಿ ಮಂಡಳಿಯ 55ನೇ ಸಭೆಯನ್ನು ಡಿಸೆಂಬರ್ 21, 2024ರಂದು ಜೈಸಲ್ಮೇರ್ ನಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ಪ್ರಕಟಿಸಿದೆ.
ಸೆಪ್ಟೆಂಬರ್ 9ರಂದು ನಡೆದಿದ್ದ ಈ ಹಿಂದಿನ ಸಭೆಯಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ ವಿಮೆಯ ಮೇಲೆ ವಿಧಿಸಲಾಗಿರುವ ಜಿಎಸ್ಟಿ ಕುರಿತ ವರದಿಯನ್ನು ಅಂತಿಮಗೊಳಿಸುವಂತೆ ಸಚಿವರ ಸಮಿತಿ (GOM) ಗಡುವು ನೀಡಲಾಗಿತ್ತು.
ಅದರನ್ವಯ, ಕಳೆದ ತಿಂಗಳು ಸಭೆ ಸೇರಿದ್ದ ಆರೋಗ್ಯ ಮತ್ತು ಜೀವ ವಿಮೆ ಜಿಎಸ್ಟಿ ಕುರಿತ ಸಚಿವರ ಸಮಿತಿ (GOM) , ಅವಧಿ ಜೀವ ವಿಮೆಗಳು ಹಾಗೂ ಹಿರಿಯ ನಾಗರಿಕರ ಜೀವ ವಿಮೆಗಳ ಮೇಲೆ ವಿಧಿಸಲಾಗಿರುವ ಜಿಎಸ್ಟಿಗೆ ವಿನಾಯತಿ ನೀಡಲು ಸರ್ವಾನುಮತದ ಒಪ್ಪಿಗೆ ನೀಡಿದೆ.
ಇದರೊಂದಿಗೆ, ಹಿರಿಯ ನಾಗರಿಕರನ್ನು ಹೊರತುಪಡಿಸಿ ರೂ. 5 ಲಕ್ಷದವರೆಗಿನ ಆರೋಗ್ಯ ವಿಮೆಯ ಕಂತು ಪಾಲಿಸುವ ಪಾಲಿಸಿದಾರರಿಗೆ ಜಿಎಸ್ಟಿಯಿಂದ ವಿನಾಯತಿ ನೀಡುವ ಪ್ರಸ್ತಾಪ ಮಾಡಲಾಗಿದೆ. ಆದರೆ, ರೂ. 5 ಲಕ್ಷ ಮೇಲ್ಪಟ್ಟ ಆರೋಗ್ಯ ವಿಮೆಗಳ ಕಂತಿನ ಮೇಲೆ ವಿಧಿಸಲಾಗಿರುವ ಶೇ. 18ರಷ್ಟು ಜಿಎಸ್ಟಿ ಮುಂದುವರಿಯಲಿದೆ.
ಇದಲ್ಲದೆ, ಕುಡಿಯುವ ನೀರಿನ ಬಾಟಲಿ, ಸೈಕಲ್ ಗಳು, ನೋಟ್ ಬುಕ್ ಗಳು, ಐಷಾರಾಮಿ ಕೈಗಡಿಯಾರಗಳು ಹಾಗೂ ಶೂಗಳು ಸೇರಿದಂತೆ ಸಾಮಾನ್ಯ ಜನರು ಬಳಸುವ ಒಂದಷ್ಟು ವಸ್ತುಗಳ ಮೇಲೆ ವಿಧಿಸಲಾಗಿರುವ ತೆರಿಗೆ ದರಗಳನ್ನು ಪರಿಷ್ಕರಿಸುವ ಕುರಿತೂ ಜಿಎಸ್ಟಿ ದರ ಸುಧಾರಣೆ ಮೇಲಿನ ಸಚಿವರ ಗುಂಪು ಸಲಹೆ ನೀಡಿದೆ. ಈ ತೆರಿಗೆ ಪರಿಷ್ಕರಣೆಯಿಂದ ಸರಕಾರದ ಬೊಕ್ಕಸಕ್ಕೆ 22,000 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
20 ಲೀಟರ್ ಅಥವಾ ಅದಕ್ಕಿಂತ ಮೇಲ್ಪಟ್ಟ ಕುಡಿಯುವ ನೀರಿನ ಬಾಟಲಿಯ ಮೇಲೆ ವಿಧಿಸಲಾಗಿರುವ ಜಿಎಸ್ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಕೆ ಮಾಡಬೇಕು ಎಂದು ತೆರಿಗೆ ದರ ಸುಧಾರಣೆ ಮೇಲಿನ ಸಚಿವರ ಗುಂಪು ಶಿಫಾರಸು ಮಾಡಿದೆ. ಒಂದು ವೇಳೆ ಸಚಿವರ ಗುಂಪಿನ ಶಿಫಾರಸು ಅಂಗೀಕಾರವಾದರೆ, 10,000 ರೂ. ಗಿಂದ ಕಡಿಮೆ ಬೆಲೆಯ ಸೈಕಲ್ ಗಳ ಮೇಲಿನ ಜಿಎಸ್ಟಿ ಶೇ. 12ರಿಂದ ಶೇ. 5ಕ್ಕೆ ಇಳಿಕೆಯಾಗಲಿದೆ.
ಹಾಗೆಯೇ, ನೋಟ್ ಬುಕ್ ಗಳ ಮೇಲಿನ ಜಿಎಸ್ಟಿಯೂ ಶೇ. 12ರಿಂದ ಶೇ. 5ಕ್ಕೆ ಇಳಿಕೆಯಾಗಲಿದೆ. ಇದರೊಂದಿಗೆ, 15,000 ರೂ. ಗಿಂತ ಹೆಚ್ಚು ಬೆಲೆಯ ಶೂಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್ಟಿಯನ್ನು ಶೇ. 28ಕ್ಕೆ ಏರಿಕೆ ಮಾಡಬೇಕು ಎಂದೂ ಪ್ರಸ್ತಾಪಿಸಲಾಗಿದೆ. 25,000 ರೂ.ಗಿಂತ ಹೆಚ್ಚು ಮೌಲ್ಯದ ಐಷಾರಾಮಿ ಕೈಗಡಿಯಾರಗಳ ಮೇಲಿನ ಜಿಎಸ್ಟಿಯನ್ನು ಶೇ. 18ರಿಂದ ಶೇ. 28ಕ್ಕೆ ಏರಿಕೆ ಮಾಡಬೇಕು ಎಂದೂ ಪ್ರಸ್ತಾಪಿಸಲಾಗಿದೆ.
ಆರೋಗ್ಯ ಮತ್ತು ಜೀವ ವಿಮೆ ಮೇಲಿನ 13 ಸದಸ್ಯರ ಸಚಿವರ ಸಮಿತಿ (GOM) ಹಾಗೂ ತೆರಿಗೆ ದರ ಸುಧಾರಣೆ ಮೇಲಿನ ಆರು ಸದಸ್ಯರ ಸಚಿವರ ಸಮಿತಿ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಂಚಾಲಕರಾಗಿದ್ದಾರೆ.
ಹಾಲಿ ಜಿಎಸ್ಟಿ ಪದ್ಧತಿಯು ನಾಲ್ಕು ಹಂತದ ಜಿಎಸ್ಟಿಯನ್ನು ಹೊಂದಿದ್ದು, ಶೇ. 5, ಶೇ. 12, ಶೇ. 18 ಹಾಗೂ ಶೇ. 28ರ ದರಗಳನ್ನು ಹೊಂದಿದೆ.