ಗುಜರಾತ್: ಕಣ್ಣಿನ ಶಸ್ತ್ರಚಿಕಿತ್ಸೆಯ ಬಳಿಕ 11 ಮಂದಿಯ ದೃಷ್ಟಿ ನಾಶ
Photo: freepik
ಅಹ್ಮದಾಬಾದ್: ಗುಜರಾತ್ನ ವಿರಾಮ್ ಗಾಂವ್ ಗ್ರಾಮದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ 17 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಬಗ್ಗೆ ಅವ್ಯವಹಾರದ ಗಂಭೀರ ಆರೋಪ ಕೇಳಿ ಬಂದಿದೆ. ಶಸ್ತ್ರಚಿಕಿತ್ಸೆಯಿಂದ ದೃಷ್ಟಿ ಕಳೆದುಕೊಂಡ ಐವರು ಚಿಕಿತ್ಸೆ ಪಡೆಯಲು ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುಜರಾತ್ನ ಅಹ್ಮದಾಬಾದ್ ಜಿಲ್ಲೆಯ ಮಂಡಲ್ ತಾಲೂಕಿನಲ್ಲಿರುವ ಸೇವಾ ನಿಕೇತನ್ ಟ್ರಸ್ಟ್ ಮಾಲಕತ್ವದ ರಮಾನಂದ ಕಣ್ಣಿನ ಆಸ್ಪತ್ರೆಯಲ್ಲಿ ಜನವರಿ 10ರಂದು 28 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಕೆಲವು ದಿನಗಳ ಬಳಿಕ ಅವರಲ್ಲಿ 17 ಮಂದಿ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾರೆ.
ಈ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಹೆಚ್ಚಿನವರು ವೃದ್ಧರಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕೆ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅನಂತರ ದೃಷ್ಟಿ ನಾಶವಾಗಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ ಎಂದು ಸಂತ್ರಸ್ತರ ಕುಟುಂಬ ಆರೋಪಿಸಿದೆ.