ಗುಜರಾತ್ | ನೇತ್ರ ಶಸ್ತ್ರಚಿಕಿತ್ಸೆ ಮುಗಿಸಿ ಕಣ್ತೆರೆದರೆ ಬಿಜೆಪಿ ಸದಸ್ಯರಾಗಿದ್ದ ರೋಗಿಗಳು!
PC : X
ಅಹ್ಮದಾಬಾದ್ : ರಾಜ್ಕೋಟ್ ನ ಆಸ್ಪತ್ರೆಯೊಂದರಲ್ಲಿ ನೇತ್ರ ಶಸ್ತ್ರಚಿಕಿತ್ಸೆಗೆ ದಾಖಲಾದ 350 ಮಂದಿ ರೋಗಿಗಳನ್ನು ಅವರ ಒಪ್ಪಿಗೆಯಿಲ್ಲದೆ ಬಿಜೆಪಿಗೆ ಸೇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜುನಾಗಡ್ ನ ಕಮಲೇಶ್ ತುಮ್ಮರ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡ ಬೆನ್ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.
A fresh controversy has erupted over the BJP membership campaign in #Gujarat. A viral video shows patients at a Rajkot hospital, who were there for eye surgery, being roused from sleep at night and recruited as BJP members. @NewIndianXpress @santwana99 @Shahid_Faridi_ pic.twitter.com/PjqsZQyPmr
— Dilip Singh Kshatriya (@Kshatriyadilip) October 19, 2024
ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ರಾಂಚೋಡ್ ದಾಸ್ ಟ್ರಸ್ಟ್ ಆಸ್ಪತ್ರೆಗೆ ಭೇಟಿ ನೀಡಿದ್ದ ತುಮ್ಮರ್, 350 ರೋಗಿಗಳಲ್ಲಿ ತಾನು ಕೂಡ ಓರ್ವನಾಗಿದ್ದೇನೆ. ತಡರಾತ್ರಿ ವ್ಯಕ್ತಿಯೋರ್ವರು ಬಂದು ನಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿಗಳನ್ನು ಕೇಳಿದ್ದಾರೆ. ನಾನು ನನ್ನ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನೀಡಿದ್ದೇನೆ. ಸ್ವಲ್ಪ ಸಮಯದ ನಂತರ, ನೀವು ಬಿಜೆಪಿ ಸದಸ್ಯರಾಗಿದ್ದಿರಿ ಎಂಬ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.
ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ರಾಂಚೋಡ್ ದಾಸ್ ಆಸ್ಪತ್ರೆಯ ಅಧಿಕಾರಿ ಶಾಂತಿ ಬಡೋಲಿಯಾ, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಗುಜರಾತ್ ಬಿಜೆಪಿ ಉಪಾಧ್ಯಕ್ಷ ಗೋರ್ಧನ್ ಜಡಾಫಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ರೀತಿ ಬಿಜೆಪಿಗೆ ಜನರನ್ನು ಸೇರಿಸಿಕೊಳ್ಳಲು ನಾವು ಯಾರಿಗೂ ಸೂಚನೆ ನೀಡಿಲ್ಲ, ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.