ಗುಜರಾತ್ | ದಲಿತ ವಿರೋಧಿ ಹೇಳಿಕೆ ನೀಡಿದ ಡಿಸಿ ಅಮಾನತಿಗೆ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಆಗ್ರಹ
ಜಿಗ್ನೇಶ್ ಮೇವಾನಿ| PC : PTI
ಮಹ್ನಿಸಾಗರ್: ದಲಿತ ವಿರೋಧಿ ಹೇಳಿಕೆ ನೀಡಿರುವ ಮಹ್ನಿಸಾಗರ್ ಜಿಲ್ಲಾಧಿಕಾರಿ ನೇಹಾ ಕುಮಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಆಗ್ರಹಿಸಿದ್ದಾರೆ.
ತಮ್ಮೊಂದಿಗೆ ಹಾಗೂ ತಮ್ಮ ಪಕ್ಷದ ಓರ್ವ ಸಹೋದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿರಿಯ ಐಪಿಎಸ್ ಅಧಿಕಾರಿ ರಾಜ್ ಕುಮಾರ್ ಪಾಂಡಿಯನ್ ವಿರುದ್ಧವೂ ಇದೇ ಬಗೆಯ ಕ್ರಮಕ್ಕೆ ಒತ್ತಾಯಿಸಿದ ಒಂದು ವಾರದ ನಂತರ, ಮೇವಾನಿ ಮೇಲಿನಂತೆ ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ದಾಖಲಾಗಿರುವ ಶೇ. 90ರಷ್ಟು ಪ್ರಕರಣಗಳನ್ನು ಬ್ಲ್ಯಾಕ್ ಮೇಲ್ ಮಾಡಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನೇಹಾ ಕುಮಾರಿ ಹೇಳಿದ್ದಾರೆ ಎಂದು ಮೇವಾನಿ ಆರೋಪಿಸಿದ್ದಾರೆ.
“ನೇಹಾ ಕುಮಾರಿಯನ್ನು ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದೂ ಅವರು ಆಗ್ರಹಿಸಿದ್ದಾರೆ.
ಆದರೆ, ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿರುವ ಜಿಲ್ಲಾಧಿಕಾರಿ ನೇಹಾ ಕುಮಾರಿ, ಇದೊಂದು ರಾಜಕೀಯ ಪ್ರಚಾರ ಎಂದು ಪ್ರತ್ಯಾರೋಪ ಮಾಡಿದ್ದಾರೆ.