ಗುಜರಾತ್ | ಕಾರು ಅಪಘಾತಕ್ಕೂ ಮುನ್ನ ಆರೋಪಿ ಚಾಲಕ ಹಾಗೂ ಆತನ ಸ್ನೇಹಿತ ಆಸನವನ್ನು ಅದಲು ಬದಲು ಮಾಡಿಕೊಂಡಿದ್ದರೆ?
ಸಿಸಿಟಿವಿ ದೃಶ್ಯಾವಳಿಗಳು ಹೇಳುತ್ತಿರುವ ಸತ್ಯವೇನು?

PC: NDTV
ವಡೋದರ: ಮಾರ್ಚ್ 13ರ (ಗುರುವಾರ) ರಾತ್ರಿ ವಡೋದರದಲ್ಲಿ ಓರ್ವ ಮಹಿಳೆಯನ್ನು ಬಲಿ ತೆಗೆದುಕೊಂಡು, ಏಳು ಮಂದಿ ಗಾಯಗೊಳ್ಳಲು ಕಾರಣವಾಗಿದ್ದ ಕಾರು ಅಪಘಾತಕ್ಕೂ ಮುನ್ನ, ಆರೋಪಿ ರಕ್ಷಿತ್ ಚೌರಾಸಿಯಾ, ತಮ್ಮ ಸ್ನೇಹಿತನ ಮೇಲೆ ಒತ್ತಡ ಹೇರಿ ಚಾಲಕನ ಆಸನಕ್ಕೆ ತನ್ನ ಜಾಗ ಬದಲಿಸಿಕೊಂಡಿರುವುದು ಅಪಘಾತ ಸಂಭವಿಸುವುದಕ್ಕೂ ಮುನ್ನ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ.
ಅಪಘಾತದ ಸಂಬಂಧ ವಡೋದರದ ಎಂಎಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಯಾಗ್ ರಾಜ್ ನಿವಾಸಿಯಾದ 23 ವರ್ಷದ ಕಾನೂನು ಪದವಿ ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾನನ್ನು ಹತ್ಯೆಯಲ್ಲದ ನರಹತ್ಯೆ ಆರೋಪದಡಿ ಪೊಲೀಸರು ಬಂಧಿಸಿದ್ದರು. ಈ ಅಪಘಾತದಲ್ಲಿ ಹೇಮಾಲಿ ಪಟೇಲ್ (35) ಎಂಬ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಇನ್ನಿತರ ಏಳು ಮಂದಿ ಗಾಯಗೊಂಡಿದ್ದರು.
ಆರೋಪಿ ರಕ್ಷಿತ್ ಚೌರಾಸಿಯಾ ಹಾಗೂ ಆತನ ಸ್ನೇಹಿತ ಸುರೇಶ್, ರಕ್ಷಿತ್ ಚೌರಾಸಿಯಾನ ನಿವಾಸವನ್ನು ಸ್ಕೂಟರ್ ನಲ್ಲಿ ತಲುಪಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಆ ದೃಶ್ಯ ದಲ್ಲಿ ರಕ್ಷಿತ್ ಸ್ಕೂಟರ್ ಚಲಾಯಿಸುತ್ತಿರುವುದು ಹಾಗೂ ಆತನ ಸ್ನೇಹಿತ ಹಿಂಬದಿ ಆಸನದಲ್ಲಿ ಕುಳಿತಿರುವುದೂ ಸೆರೆಯಾಗಿದೆ. ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಸುರೇಶ್ ನಿವಾಸವನ್ನು ತಲುಪಿರುವ ರಕ್ಷಿತ್, ನಂತರ ತನ್ನ ಸ್ಕೂಟರ್ ಅನ್ನು ಆತನ ನಿವಾಸದ ಬಳಿಯೇ ನಿಲ್ಲಿಸಿದ್ದಾನೆ. ಬಳಿಕ ಅವರಿಬ್ಬರೂ ಮೆಟ್ಟಿಲು ಹತ್ತಿಕೊಂಡು ಸುರೇಶ್ ನಿವಾಸದೊಳಕ್ಕೆ ತೆರಳಿದ್ದಾರೆ. ಈ ವೇಳೆ ರಕ್ಷಿತ್ ಕೈಯಲ್ಲಿ ಬಾಟಲಿಯೊಂದನ್ನು ಹಿಡಿದುಕೊಂಡಿದ್ದರೂ, ಅದರಲ್ಲಿ ಏನಿತ್ತು ಎಂಬುದಿನ್ನೂ ಅಸ್ಪಷ್ಟವಾಗಿದೆ.
ಇದಾದ 15 ನಿಮಿಷಗಳ ನಂತರ, ಪ್ರಾಂಶು ಚೌಹಾಣ್ ಸುರೇಶ್ ನಿವಾಸವನ್ನು ತನ್ನ ಸೆಡಾನ್ ಕಾರಿನಲ್ಲಿ ತಲುಪಿದ್ದಾನೆ. ಬಳಿಕ ತನ್ನ ಕಾರನ್ನು ಮನೆಯ ಹೊರಗೆ ನಿಲ್ಲಿಸಿರುವ ಆತ, ಮೆಟ್ಟಿಲೇರಿಕೊಂಡು ಸುರೇಶ್ ನಿವಾಸಕ್ಕೆ ತೆರಳಿದ್ದಾನೆ. ರಾತ್ರಿ 11.25ರ ವೇಳೆಗೆ ರಕ್ಷಿತ್ ಹಾಗೂ ಪ್ರಾಂಶು ಮೆಟ್ಟಿಲಿನಿಂದ ಕೆಳಗಿಳಿದು, ಕಾರಿನೊಳಗೆ ಕುಳಿತಿದ್ದಾರೆ. ಪ್ರಾಂಶು ಚಾಲಕನ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೆ, ಆತನ ಬಳಿಗೆ ರಕ್ಷಿತ್ ತೆರಳಿದ್ದಾನೆ. ಈ ವೇಳೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಡಚಣೆಯುಂಟಾಗಿರುವುದರಿಂದ, ಅದರಲ್ಲಿ ರಕ್ಷಿತ್ ಕಂಡು ಬಂದಿಲ್ಲ. ಆದರೆ, ಪ್ರಾಂಶು ಪಕ್ಕದ ಆಸನಕ್ಕೆ ಸ್ಥಳಾಂತರಗೊಳ್ಳುವುದಕ್ಕೂ ಮುನ್ನ, ರಕ್ಷಿತ್ ನೊಂದಿಗೆ ಏನೋ ಮಾತನಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಈ ವೇಳೆ, ನಾನು ಕಾರು ಚಲಾಯಿಸುತ್ತೇನೆ ಎಂದು ಪ್ರಾಂಶುವನ್ನು ರಕ್ಷಿತ್ ಬಲವಂತಪಡಿಸಿರುವಂತೆ ಕಾಣಿಸುತ್ತದೆ. ಆ ನಂತರ, ಕಾರು ಮುಂದೆ ಚಲಿಸಲು ಪ್ರಾರಂಭಿಸಿದ್ದು, ಕೆಲವೇ ಹೊತ್ತಿನಲ್ಲಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತ ಸಂಭವಿಸಿದಾಗ ಹೊರಗಿನಿಂದ ಸೆರೆ ಹಿಡಿಯಲಾಗಿರುವ ವಿಡಿಯೊದಲ್ಲಿ ಕಾರಿನ ಮುಂಭಾಗ ಜಖಂ ಆಗಿರುವುದು ಹಾಗೂ ಕಾರಿನೊಳಗೆ ಏರ್ ಬ್ಯಾಗ್ ಗಳು ಬಿಚ್ಚಿಕೊಂಡಿರುವುದು ಕಂಡು ಬಂದಿದೆ. ಆ ವಿಡಿಯೊದಲ್ಲಿ, ರಕ್ಷಿತ್, ಪ್ರಾಂಶುನನ್ನು ಹಿಡಿದುಕೊಳ್ಳಲು ಹೋದಾಗ, ಆತ ದೂರ ಸರಿ ಎನ್ನುತ್ತಿರುವುದು, ಕಾರಿನಿಂದ ಇಳಿದ ನಂತರ, “ಅವನು ಹುಚ್ಚ” ಎಂದು ಹೇಳುತ್ತಿರುವುದು ಸೆರೆಯಾಗಿದೆ. ನಂತರ, ‘ಮತ್ತೊಂದು ರೌಂಡ್’ ಎಂದು ಕಿರುಚಲು ಪ್ರಾರಂಭಿಸಿರುವ ರಕ್ಷಿತ್, ನಂತರ, ‘ನಿಕಿತಾ’, ‘ಓಂ ನಮಃ ಶಿವಾಯ’ ಎಂದೂ ಕೂಗಾಡಿದ್ದಾನೆ. ಇದನ್ನು ನೋಡಿದ ಕುಪಿತ ದಾರಿಹೋಕರು ಆತನನ್ನು ಮನಬಂದಂತೆ ಥಳಿಸಿದ್ದಾರೆ. ಸದ್ಯ ಪ್ರಾಂಶು ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ರಕ್ಷಿತ್ ಹಾಗೂ ಪ್ರಾಂಶು ತಮ್ಮ ಆಸನಗಳನ್ನು ಅದಲು ಬದಲು ಮಾಡಿಕೊಂಡಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ರಕ್ಷಿತ್ ಏನಾದರೂ ಆಸನಗಳನ್ನು ಬದಲಿಸಿಕೊಳ್ಳಲು ಬಲವಂತಪಡಿಸಿದ್ದನೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತ ನರಸಿಂಹ ಕೋಮರ್, ಆ ಕುರಿತು ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಆದರೆ, ನಾನು ಮದ್ಯವನ್ನೂ ಸೇವಿಸಿರಲಿಲ್ಲ ಹಾಗೂ ಕಾರನ್ನು ವೇಗವಾಗಿಯೂ ಚಲಾಯಿಸಿರಲಿಲ್ಲ ಎಂದು ವಾದಿಸಿದ್ದ ರಕ್ಷಿತ್, ಅಪಘಾತಕ್ಕೆ ಬಿಚ್ಚಿಕೊಂಡ ಏರ್ ಬ್ಯಾಗ್ ಗಳು ಕಾರಣ ಎಂದು ದೂರಿದ್ದ. “ನಾವು ಸ್ಕೂಟರೊಂದನ್ನು ಹಿಂದಿಕ್ಕಿ ಮುಂದೆ ಹೋಗುತ್ತಿದ್ದೆವು. ನಾವು ಬಲಕ್ಕೆ ತಿರುಗಿದಾಗ, ಅಲ್ಲೊಂದು ರಸ್ತೆ ಗುಂಡಿಯಿತ್ತು. ಹೀಗಾಗಿ ನಮ್ಮ ಕಾರು ಅಲ್ಲಿಯೇ ಇದ್ದ ಇನ್ನೊಂದು ಕಾರಿಗೆ ತಾಕಿದ್ದರಿಂದ ಏರ್ ಬ್ಯಾಗ್ ಬಿಚ್ಚಿಕೊಂಡಿತು. ಇದರಿಂದ ರಸ್ತೆ ಕಾಣದಾಗಿ, ಕಾರು ನನ್ನ ನಿಯಂತ್ರಣ ಕಳೆದುಕೊಂಡಿತು” ಎಂದು ಆತ ಮಾಧ್ಯಮಗಳಿಗೆ ತಿಳಿಸಿದ್ದಾನೆ. “ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ನನಗೆ ತಿಳಿಯಿತು. ಅದು ನನ್ನ ತಪ್ಪಾಗಿದ್ದು, ನಾನು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಬಯಸುತ್ತೇನೆ” ಎಂದೂ ಆತ ಹೇಳಿದ್ದಾನೆ.
ಈ ಅಪಘಾತದ ಬಗ್ಗೆ ವ್ಯಾಪಕ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದ್ದು, ಇಂತಹ ಅಪಘಾತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗಾಯಾಳುಗಳು ಹಾಗೂ ಸಂತ್ರಸ್ತರ ಕುಟುಂಬಗಳ ಸದಸ್ಯರು ಆಗ್ರಹಿಸಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರಾಗಿರುವ ವಿಕಾಸ್ ಕೆವ್ಲಾನಿ, “ಕೇವಲ ದಂಡ ವಿಧಿಸುವುದರಿಂದ ಇಂತಹ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. “ದಂಡ ಪರಿಹಾರವಲ್ಲ. ಕಟ್ಟುನಿಟ್ಟಿನ ಕ್ರಮಗಳಿದ್ದಾಗ ಮಾತ್ರ, ನಾವೇನು ಮಾಡಿದ್ದೇವೆ ಎಂಬುದು ಅವರಿಗೆ ಅರ್ಥವಾಗಲು ಸಾಧ್ಯ” ಎಂದು ಅವರು ಹೇಳಿದ್ದಾರೆ.