ಗುಜರಾತ್: ಮಂದಿರ ನಿರ್ಮಾಣಕ್ಕಾಗಿ ಮೋದಿಯನ್ನು ಅಭಿನಂದಿಸಲು ಮಸೂದೆ; ಕಾಂಗ್ರೆಸ್, ಆಪ್ ಬೆಂಬಲ
ನರೇಂದ್ರ ಮೋದಿ | Photo: PTI
ಗಾಂಧಿನಗರ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರವನ್ನು ಉದ್ಘಾಟಿಸಿರುವುದಕ್ಕಾಗಿ ಪ್ರಧಾನ ನರೇಂದ್ರ ಮೋದಿಯನ್ನು ಅಭಿನಂದಿಸುವ ಗುಜರಾತ್ ವಿಧಾನಸಭೆಯ ನಿರ್ಣಯಕ್ಕೆ ರಾಜ್ಯದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೋಮವಾರ ಬೆಂಬಲ ನೀಡಿವೆ.
ಮಂದಿರವನ್ನು ಜನವರಿ 22ರಂದು ಉದ್ಘಾಟಿಸಲಾಗಿತ್ತು.
ಗುಜರಾತ್ ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ, ಸೋಮವಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ‘‘ಐತಿಹಾಸಿಕ ಸಾಂಸ್ಕೃತಿಕ ಕರ್ತವ್ಯವನ್ನು ನಿಭಾಯಿಸಿರುವುದಕ್ಕಾಗಿ’’ ಮೋದಿಗೆ ಕೃತಜ್ಞತೆ ಸಲ್ಲಿಸುವ ನಿರ್ಣಯವೊಂದನ್ನು ವಿಧಾನಸಭೆಯಲ್ಲಿ ಮಂಡಿಸಿದರು.
‘‘ದೂರದೃಷ್ಟಿಯುಳ್ಳ ಪ್ರಧಾನಿ ಮತ್ತು 500 ವರ್ಷಗಳಿಗೂ ಹೆಚ್ಚು ಕಾಲ ಕಾದ ಹಿಂದೂ ಸಮುದಾಯದಿಂದಾಗಿ ಅಯೋಧ್ಯೆಯ ಭವ್ಯ ದೇಗುಲದಲ್ಲಿ ರಾಮ ಲಲ್ಲಾ ವಿಗ್ರಹವನ್ನು ಸ್ಥಾಪಿಸಲು ಸಾಧ್ಯವಾಯಿತು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ’’ ಎಂದು ಮುಖ್ಯಮಂತ್ರಿ ತನ್ನ ನಿರ್ಣಯದಲ್ಲಿ ಹೇಳಿದ್ದಾರೆ.
ನಿರ್ಣಯವನ್ನು ಸ್ವಾಗತಿಸಿದ ಕಾಂಗ್ರೆಸ್ ಶಾಸಕ ಅರ್ಜುನ್ ಮೋದ್ವಾಡಿಯ, ದೇವಸ್ಥಾನ ನಿರ್ಮಾಣವಾಗಿರುವ ಸ್ಥಳದಲ್ಲಿ ಅಡಿಗಲ್ಲು ಹಾಕಲು 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವಕಾಶ ನೀಡಿದ್ದರು ಎಂದು ಹೇಳಿದರು. ಆಮ್ ಆದ್ಮಿ ಪಾರ್ಟಿಯ ಉಮೇಶ್ ಮಕ್ವಾನ ಕೂಡ ನಿರ್ಣಯವನ್ನು ಸ್ವಾಗತಿಸಿದರು.