ಗುಜರಾತ್: ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ ಬೋಗಿಗಳು
ಅಪಾಯದಿಂದ ಪಾರಾದ ಪ್ರಯಾಣಿಕರು
PC : indiatoday.in
ವಡೋದರ: ಅಹಮದಾಬಾದ್ ನಿಂದ ಮುಂಬೈಗೆ ಚಲಿಸುತ್ತಿದ್ದ ಡಬಲ್ ಡೆಕರ್ ಎಕ್ಸ್ ಪ್ರೆಸ್ ರೈಲೊಂದರ ಎರಡು ಬೋಗಿಗಳು ಬೇರ್ಪಟ್ಟ ಘಟನೆ ಗುಜರಾತ್ ನ ವಡೋದರದ ಗೊತಂಗಮ್ ಯಾರ್ಡ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಅಹಮದಾಬಾದ್ ನಿಂದ ಮುಂಬೈಗೆ ತೆರಳುತ್ತಿದ್ದ ಡಬಲ್ ಡೆಕರ್ ರೈಲು ಸಂಖ್ಯೆ 12932ನ ಎರಡು ಬೋಗಿಗಳು ವಡೋದರ ವಿಭಾಗದ ಗೊತಂಗಮ್ ಯಾರ್ಡ್ ಬಳಿ ಬೆಳಗ್ಗೆ 8.50ರ ವೇಳೆಗೆ ಕಳಚಿಕೊಂಡಿವೆ.
ಬೋಗಿಗಳನ್ನು ಮರು ಜೋಡಿಸುವ ಕೆಲಸ ಪ್ರಗತಿಯಲ್ಲಿದ್ದು, ರೈಲಿನ ಮುಂಭಾಗ ಹಾಗೂ ಹಿಂಭಾಗಗಳನ್ನು ಪ್ಲ್ಯಾಟ್ ಫಾರ್ಮ್ ಗೆ ತರಲಾಗಿದೆ.
ರೈಲಿನ ಕಪ್ಲರ್ ತಪ್ಪಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರಿಂದ ಈ ಘಟನೆ ನಡೆದಿದ್ದು, ಈ ಘಟನೆಯಿಂದಾಗಿ ಚಲಿಸುತ್ತಿದ್ದ ರೈಲಿನಿಂದ ಬೋಗಿ ಸಂಖ್ಯೆ 7 ಹಾಗೂ 8 ಬೇರ್ಪಟ್ಟಿವೆ. ಆ ಸಂದರ್ಭದಲ್ಲಿ ರೈಲು ನಿಧಾನವಾಗಿ ಚಲಿಸುತ್ತಿದ್ದುದರಿಂದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ರೈಲು ದಿಢೀರನೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ಗಾಬರಿಯುಂಟಾಯಿತು. ಆದರೆ, ರೈಲಿನ ಚಾಲನಾ ಸಿಬ್ಬಂದಿಗಳು ಹಾಗೂ ಪರಿಚಾರಕ ಸಿಬ್ಬಂದಿಗಳು ಘಟನೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು, ಘಟನೆಯ ಕುರಿತು ಅಗತ್ಯ ತನಿಖೆಯನ್ನು ಕೈಗೊಂಡಿದ್ದಾರೆ. ರೈಲಿನ ಕಪ್ಲರ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಘಟನೆಯ ಬೆನ್ನಿಗೇ, ರೈಲಿಗೆ ಪರ್ಯಾಯ ಕಪ್ಲರ್ ಅನ್ನು ಅಳವಡಿಸಿ, ರೈಲು ತನ್ನ ಪ್ರಯಾಣ ಮುಂದುವರಿಸುವುದನ್ನು ಖಾತರಿ ಪಡಿಸಲು ರೈಲ್ವೆ ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ.