ಗುಜರಾತ್ | ಲಂಚವಾಗಿ ಐಫೋನ್ 16 ಪ್ರೊ ಪಡೆದ ಆರೋಪ; ಪೋಲೀಸ್ ಇನ್ಸ್ಪೆಕ್ಟರ್ ರನ್ನು ಬಂಧಿಸಿದ ಎಸಿಬಿ
ಸಾಂದರ್ಭಿಕ ಚಿತ್ರ (credit: apple.com)
ಅಹಮದಾಬಾದ್: ಇಂಧನ ಡೀಲರ್ ಒಬ್ಬರಿಂದ 1.44 ಲಕ್ಷ ರೂಪಾಯಿ ಮೌಲ್ಯದ ಆ್ಯಪಲ್ ಐಫೋನ್ 16 ಪ್ರೊ ಅನ್ನು ಲಂಚವಾಗಿ ಪಡೆದ ಆರೋಪದ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಂಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಬಂಧಿತರನ್ನು ನವಸಾರಿ ಜಿಲ್ಲೆಯ ಧೋಲೈ ಬಂದರಿನಲ್ಲಿರುವ ಮೆರೈನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಕುಬಾವತ್ ಎಂದು ಗುರುತಿಸಲಾಗಿದೆ.
"ಲೈಟ್ ಡೀಸೆಲ್ ಆಯಿಲ್ (ಎಲ್ಡಿಒ) ಪರವಾನಗಿ ಪಡೆದ ಡೀಲರ್ ಮತ್ತು ಧೋಲೈ ಬಂದರಿನಲ್ಲಿ ಬೋಟ್ ಮಾಲಕರಿಗೆ ಇಂಧನವನ್ನು ಮಾರಾಟ ಮಾಡುವ ದೂರುದಾರರಿಂದ ಐಫೋನ್ 16 ಪ್ರೊ ಮೊಬೈಲ್ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ" ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
"ಇತ್ತೀಚೆಗೆ ತನ್ನ ವ್ಯವಹಾರಕ್ಕೆ ಸಂಬಂಧಿಸಿದ ಪರವಾನಗಿ ಮತ್ತು ಇತರ ದಾಖಲೆಗಳೊಂದಿಗೆ ಮರೈನ್ ಪೊಲೀಸ್ ಠಾಣೆಯಲ್ಲಿ ತನ್ನನ್ನು ಭೇಟಿಯಾಗುವಂತೆ ಡೀಲರ್ಗೆ ಇನ್ಸ್ಪೆಕ್ಟರ್ ಕುಬಾವತ್ ಸೂಚಿಸಿದ್ದರು. ಭೇಟಿಯ ವೇಳೆ ಲಂಚ ನೀಡದಿದ್ದರೆ ವ್ಯವಹಾರವನ್ನು ಮುಚ್ಚುವುದಾಗಿ ದೂರುದಾರನಿಗೆ ಪೊಲೀಸ್ ಇನ್ಸ್ಪೆಕ್ಟರ್ ಬೆದರಿಸಿದ್ದರು. ದೂರು ಸ್ವೀಕರಿಸಿದ ಎಸಿಬಿ ಹೆಣೆದ ಬಲೆಯಲ್ಲಿ ತನ್ನ ಪೊಲೀಸ್ ಠಾಣೆಯ ಚೇಂಬರ್ನಲ್ಲಿ ಇನ್ಸ್ಪೆಕ್ಟರ್ ಅವರನ್ನು ಬಂಧಿಸಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.