ಗುಜರಾತ್ | ಪೊಲೀಸರು ಹಾಗೂ ಗೋರಕ್ಷಕರ ವಿರುದ್ಧ ಎಫ್ಐಆರ್ ದಾಖಲಿಸಲು ಗೋದ್ರಾದ ನ್ಯಾಯಾಲಯ ಆದೇಶ
ಜಾನುವಾರು ಮಾಲಕನ ವಿರುದ್ಧ ಸುಳ್ಳು ಪ್ರಕರಣ
ಸಾಂದರ್ಭಿಕ ಚಿತ್ರ
ಗೋಧ್ರಾ : ಕಾನೂನುಬಾಹಿರ ಗೋವಧೆಗಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಸುಳ್ಳು ಪ್ರಕರಣದಲ್ಲಿ ಇಬ್ಬರನ್ನು ಸಿಲುಕಿಸಲು ಯತ್ನಿಸಿದ ಆರೋಪದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಗೋರಕ್ಷಕ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಗುಜರಾತ್ ನ ಗೋಧ್ರಾ ಪಟ್ಟಣದಲ್ಲಿನ ನ್ಯಾಯಾಲಯವೊಂದು ಆದೇಶಿಸಿದೆ.
ಜಾನುವಾರುಗಳ ಮಾಲಕ ಇಲ್ಯಾಸ್ ದಾವಲ್ ಹಾಗೂ ಚಾಲಕ ನಝೀರ್ ಮಲಿಕ್ ವಧೆಗಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು ಎಂಬುದನ್ನು ನಿರೂಪಿಸಲು ಪ್ರಾಸಿಕ್ಯೂಷನ್ ಸಣ್ಣ ಸಾಕ್ಷ್ಯವನ್ನು ಒದಗಿಸಲೂ ವಿಫಲಗೊಂಡಿದೆ ಎಂದು ಅಭಿಪ್ರಾಯ ಪಟ್ಟ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೇಝ್ ಅಹ್ಮದ್ ಮಾಳವಿಯ, ಅವರಿಬ್ಬರನ್ನೂ ತಮ್ಮ ಆದೇಶದಲ್ಲಿ ಖುಲಾಸೆಗೊಳಿಸಿದ್ದಾರೆ.
ಮುಖ್ಯ ಪೇದೆಗಳಾದ ನರ್ವತ್ ಸಿಂಗ್ ಹಾಗೂ ಶಂಕರ್ ಸಿಂಗ್ ಸಜ್ಜನ್ ಸಿಂಗ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂ.ಎಸ್.ಮುನಿಯ, ಹಾಗೂ ಪಂಚನಾಮೆ ಸಾಕ್ಷಿಗಳಾದ ಮಾರ್ಗೇಶ್ ಸೋನಿ ಮತ್ತು ದರ್ಶನ್ ಸೋನಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 248ರ ಅಡಿ ಸುಳ್ಳು್ ಕ್ರಿಮಿನಲ್ ವಿಚಾರಣೆಗೆ ಚಾಲನೆ ನೀಡಿದ ಆರೋಪದ ಮೇಲೆ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದಲ್ಲದೆ, ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಚಾಲನೆ ನೀಡಬೇಕು ಎಂದೂ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.
ಇದೀಗ ಖುಲಾಸೆಗೊಂಡಿರುವ ಆರೋಪಿಗಳು ಪರಿಹಾರಕ್ಕಾಗಿ ರಾಜ್ಯ ಸರಕಾರ, ಪೊಲೀಸ್ ಅಧಿಕಾರಿಗಳು ಹಾಗೂ ಸಾಕ್ಷಿದಾರರ ವಿರುದ್ಧ ಪ್ರತ್ಯೇಕ ಮೊಕದ್ದಮೆಯನ್ನು ದಾಖಲಿಸಲು ಸ್ವತಂತ್ರರಾಗಿದ್ದಾರೆ ಎಂದೂ ನ್ಯಾಯಾಲಯ ಹೇಳಿದೆ.
ಜುಲೈ 2022ರಲ್ಲಿ ಮಲಿಕ್ ಹಾಗೂ ದಾವಲ್ ಎಮ್ಮೆ, ಮರಿ ಎಮ್ಮೆ ಹಾಗೂ ಜರ್ಸಿ ಆಕಳೊಂದನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದರು. ಈ ಜಾನುವಾರುಗಳನ್ನು ಸಣ್ಣ ಹಗ್ಗಗಳಿಂದ ಕಟ್ಟಿ ಹಾಕಲಾಗಿತ್ತು ಹಾಗೂ ಸಾಗಾಟದ ಸಂದರ್ಭದಲ್ಲಿ ಯಾವುದೇ ಮೇವಿನ ವ್ಯವಸ್ಥೆ ಮಾಡಿರಲಿಲ್ಲ ಎಂದು ಪೊಲೀಸರು ಆರೋಪಿಸಿದ್ದರು.
ಆರೋಪಿಗಳ ವಿರುದ್ಧ ಗುಜರಾತ್ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ, ಪ್ರಾಣಿಗಳ ವಿರುದ್ಧ ಕ್ರೌರ್ಯ ನಿಷೇಧ ಕಾಯ್ದೆ, ಮೋಟಾರು ವಾಹನ ಕಾಯ್ದೆ ಹಾಗೂ ಗುಜರಾತ್ ಪೊಲೀಸ್ ಕಾಯ್ದೆಯಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿತ್ತು.