ಅದೃಷ್ಟದ ಕಾರನ್ನು ಸಮಾಧಿ ಮಾಡುವ ಮೂಲಕ ವಿದಾಯ ಹೇಳಿದ ರೈತ ಕುಟುಂಬ!
Photo credit: indiatoday.in
ಗುಜರಾತ್: ಅಮ್ರೇಲಿ ಜಿಲ್ಲೆಯಲ್ಲಿ ರೈತ ಕುಟುಂಬವೊಂದು ತಮ್ಮ ಅದೃಷ್ಟದ ಕಾರನ್ನು ಸಮಾಧಿ ಮಾಡುವ ಮೂಲಕ ವಿದಾಯ ಹೇಳಿದ ಅಪರೂಪದ ಘಟನೆ ನಡೆದಿದೆ.
ಗುಜರಾತ್ ನ ಲಠೀ ತಾಲೂಕಿನ ಪಾದರಶಿಂಗ ಗ್ರಾಮದಲ್ಲಿ ಗುರುವಾರ ಸಂಜಯ ಪೋಲಾರ ಮತ್ತು ಅವರ ಕುಟುಂಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಚಕರು, ಗ್ರಾಮಸ್ಥರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದು, ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಗನ್ –ಆರ್ ಕಾರನ್ನು ಹೂವುಗಳಿಂದ ಅಲಂಕರಿಸಿ ಕಾರಿನ ಸುತ್ತ ಗರ್ಬಾ ನೃತ್ಯ ಮಾಡುತ್ತಾ ಕಾರನ್ನು ಸಮಾಧಿ ಸ್ಥಳದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿದೆ. ಬಳಿಕ ಜೆಸಿಬಿಯಿಂದ ಅಗೆದಿದ್ದ 15 ಅಡಿ ಆಳದ ದೊಡ್ಡದಾದ ಹೊಂಡಕ್ಕೆ ಇಳಿಸಿ 12 ವರ್ಷಗಳ ಹಿಂದೆ ಖರೀದಿಸಿದ್ದ ವಾಗನ್ –ಆರ್ (Wagon R) ಕಾರನ್ನು ಸಮಾಧಿ ಮಾಡಲಾಗಿದೆ. ಈ ವೇಳೆ ಕಾರಿಗೆ ಹಸಿರು ಬಟ್ಟೆಯನ್ನು ಹೊದಿಸುವುದು, ಪುರೋಹಿತರು ಮಂತ್ರಗಳನ್ನು ಪಠಿಸುತ್ತಿರುವುದು, ನೆರದವರು ಗುಲಾಬಿ ದಳಗಳನ್ನು ಕಾರಿನ ಮೇಲೆ ಎಸೆಯುತ್ತಿರುವುದು, ಕೊನೆಗೆ ಜೆಸಿಬಿ ಮೂಲಕ ಕಾರಿಗೆ ಮಣ್ಣು ಹಾಕುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ ಪೋಲಾರ, ನಾನು ಸುಮಾರು 12 ವರ್ಷಗಳ ಹಿಂದೆ ಈ ಕಾರನ್ನು ಖರೀದಿಸಿದ್ದೆ, ಇದು ನಮ್ಮ ಕುಟುಂಬಕ್ಕೆ ಸಮೃದ್ಧಿಯನ್ನು ತಂದಿದೆ. ಈ ಕಾರು ಖರೀದಿಸಿದ ಬಳಿಕ ನಮ್ಮ ಕುಟುಂಬ ವ್ಯಾಪಾರದಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ ಗೌರವವನ್ನು ಕೂಡ ಗಳಿಸಿದೆ. ಅದನ್ನು ಮಾರುವ ಬದಲು ನಾನು ಜಮೀನಿನಲ್ಲಿ ಸಮಾಧಿಯನ್ನು ಮಾಡಿದ್ದೇನೆ. ಸಮಾರಂಭಕ್ಕೆ 4 ಲಕ್ಷ ಖರ್ಚು ಮಾಡಿದ್ದು, ಅದೃಷ್ಟದ ಕಾರನ್ನು ಮುಂದಿನ ಪೀಳಿಗೆಗೆ ನೆನಪಿಸುವ ಸಲುವಾಗಿ ಸಮಾಧಿ ಸ್ಥಳದಲ್ಲಿ ಮರವನ್ನು ನೆಡುತ್ತೇನೆ ಎಂದು ಹೇಳಿದ್ದಾರೆ.