2015ರ ಪಾಟೀದಾರ್ ಮೀಸಲಾತಿ ಹೋರಾಟ | 9 ಪ್ರಕರಣಗಳನ್ನು ಹಿಂಪಡೆಯಲಿರುವ ಗುಜರಾತ್ ಸರಕಾರ ; ಹಾರ್ದಿಕ್ ಪಟೇಲ್ ಶ್ಲಾಘನೆ

Photo Credit: PTI File Photo
ಅಹಮದಾಬಾದ್: 2015ರ ಪಾಟೀದಾರ್ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ 9 ಪ್ರಕರಣಗಳನ್ನು ಹಿಂಪಡೆಯಲು ಗುಜರಾತ್ ಸರಕಾರ ನಿರ್ಧರಿಸಿದೆ ಎಂದು ಶುಕ್ರವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹರ್ಷ್ ಸಾಂಘವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಾಂಘವಿ, “ಪಾಟೀದಾರ್ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದ 9 ಪ್ರಕರಣಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನಿರ್ಧರಿಸಿದ್ದಾರೆ. ಈ ಪ್ರಕರಣಗಳ ತನಿಖೆ ಸಂಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ” ಎಂದು ತಿಳಿಸಿದರು.
ಆಗಸ್ಟ್ 25, 2015ರಂದು ಅಹಮದಾಬಾದ್ ನಲ್ಲಿ ನಡೆದಿದ್ದ ಪಾಟೀದಾರ್ ಮೀಸಲಾತಿ ಹೋರಾಟದ ಮಹಾ ಸಮಾವೇಶದ ಸಂದರ್ಭದಲ್ಲಿ ಗುಜರಾತ್ ನಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತ್ತು. ಇದರ ಬೆನ್ನಿಗೇ, ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಹೋರಾಟದ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಹಾಗೂ ಅವರ ಮೂವರು ಸಹಚರರನ್ನು ಬಂಧಿಸಿ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ದೇಶ ದ್ರೋಹ) ಹಾಗೂ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಗುಜರಾತ್ ಸರಕಾರದ ಈ ನಡೆಯನ್ನು ಶ್ಲಾಘಿಸಿರುವ ಆಗಿನ ಪಾಟೀದಾರ್ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಹಾಗೂ ಹಾಲಿ ಬಿಜೆಪಿ ಶಾಸಕರಾಗಿರುವ ಹಾರ್ದಿಕ್ ಪಟೇಲ್, ಹಿಂಪಡೆಯಲಾಗುತ್ತಿರುವ ಪ್ರಕರಣಗಳಲ್ಲಿ ನನ್ನ ಹಾಗೂ ಇನ್ನಿತರ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಎರಡು ದೇಶ ದ್ರೋಹ ಪ್ರಕರಣಗಳೂ ಸೇರಿವೆ ಎಂದು ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ವಿರುದ್ಧ ಪಾಟೀದಾರ್ ಮೀಸಲಾತಿ ಹೋರಾಟದ ಸಂದರ್ಭದಲ್ಲಿನ ಹಿಂಸಾಚಾರವಲ್ಲದೆ, ಪಾಟೀದಾರ್ ಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ತಮ್ಮ ಸಮುದಾಯದ ಯುವಕನೊಬ್ಬನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈಯ್ಯುವಂತೆ ಪ್ರಚೋದಿಸಿದ ಆರೋಪದ ಮೇಲೆ ಮತ್ತೊಂದು ದೇಶ ದ್ರೋಹ ಪ್ರಕರಣ ದಾಖಲಾಗಿತ್ತು.