ಗುಜರಾತ್:ಬಂಧಿತರಿಗೆ ಸಾರ್ವಜನಿಕವಾಗಿ ಛಡಿಯೇಟು ನಾಲ್ವರು ಪೊಲೀಸರ ವಿರುದ್ಧ ದೋಷಾರೋಪ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಖೇಡಾ ಜಿಲ್ಲೆಯಲ್ಲಿ 2022ರ ಆಕ್ಟೋಬರ್ನಲ್ಲಿ ಕಲ್ಲೆಸೆತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾದ ಮುಸ್ಲಿಂ ಸಮುದಾಯದ ಕೆಲವರಿಗೆ ಸಾರ್ವಜನಿಕವಾಗಿ ಛಡಿಯೇಟು ನೀಡಿದ ಪ್ರಕರಣದಲ್ಲಿ ನ್ಯಾಯಾಲಯ ನಿಂದನೆಯ ಆರೋಪ ಎದುರಿಸುತ್ತಿರುವ ನಾಲ್ವರು ಪೊಲೀಸರ ವಿರುದ್ಧ ಗುಜರಾತ್ ಹೈಕೋರ್ಟ್ ಬುಧವಾರ ದೋಷಾರೋಪ ದಾಖಲಿಸಿದೆ.
ಆರೋಪಿ ಪೊಲೀಸರಲ್ಲಿ ಒಬ್ಬಾತ ಈ ಕಾನೂನು ಬಾಹಿರ ಹಾಗೂ ಅಪಮಾನಕಾರಿ ಕೃತ್ಯವನ್ನು ನಡಸುವುದಕ್ಕೆ ವೌನಸಮ್ಮತಿಯನ್ನು ನೀಡಿದ್ದಾನೆ. ಹಾಗಾಗಿ ಆತನ ವಿರುದ್ಧ ದೋಷಾರೋಪ ದಾಖಲಿಸುವಲ್ಲಿ ಯಾವುದೇ ರಿಯಾಯಿತಿ ನೀಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬಂಧಿತರಿಗೆ ಸಾರ್ವಜನಿಕವಾಗಿ ಛಡಿಯೇಟು ನೀಡುವ ಮೂಲಕ ಆರೋಪಿ ಪೊಲೀಸರು ಸುಪ್ರೀಂಕೋರ್ಟ್ ಮಾರ್ಗದರ್ಶಿಸೂತ್ರಗಳನ್ನು ಉಲ್ಲಂಘಿಸಿದ್ದಾರೆಂದು ಅದು ಹೇಳಿದೆ.
2022ರ ಆಕ್ಟೋಬರ್ 4ರಂದುಪ ಉಂಧೆಲಾ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಆರೋಪಿಗಳಾದ ಓರ್ವ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ಟೇಬಲ್ ಗಳು , ಅರ್ಜಿದಾರರನ್ನು ಕಂಬಕ್ಕೆ ಕಟ್ಟಿ, ಸಾರ್ವಜನಿಕವಾಗಿ ಥಳಿಸುವ ಕೃತ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಸುಪೆಹಿಯಾ ಹಾಗೂ ಎಂ.ಆರ್.ಮೆಂಗ್ಡೆ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಪೀಠವು ಅಕ್ಟೋಬರ್ 11ಕ್ಕೆ ನಿಗದಿಪಡಿಸಿದೆ.