ಗುಜರಾತ್: ಯುವತಿಯ ಮರ್ಯಾದೆಗೇಡು ಹತ್ಯೆ ತಂದೆ, ಚಿಕ್ಕಪ್ಪನ ಬಂಧನ
ಭಾವನಗರ (ಗುಜರಾತ್): ಅಂತರ್ಜಾತಿ ಪ್ರೀತಿಯ ಕಾರಣಕ್ಕೆ 19 ವರ್ಷದ ಪುತ್ರಿಯನ್ನು ಹತ್ಯೆಗೈದ ಆರೋಪದಲ್ಲಿ ವ್ಯಕ್ತಿ ಹಾಗೂ ಆತನ ಸಹೋದರನನ್ನು ಗುಜರಾತ್ ನ ಭಾವನಗರ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಯುವತಿಯನ್ನು ಮಾರ್ಚ್ 7ರಂದು ಕುತ್ತಿಗೆ ಹಿಸುಕಿ ಹತ್ಯೆಗೈಯಲಾಗಿದೆ. ಆಕೆಯ ಮೃತದೇಹದ ಅಂತ್ಯಕ್ರಿಯೆಯನ್ನು ತರಾತುರಿಯಿಂದ ಹಾಗೂ ರಹಸ್ಯವಾಗಿ ನಡೆಸಲಾಗಿದೆ. ಇದು ಸಂಬಂಧಿಕರಿಗೆ ಅನುಮಾನ ಉಂಟು ಮಾಡಿತು ಎಂದು ಉಪ ಪೊಲೀಸ್ ಅಧೀಕ್ಷಕ ಮಿಹಿರ್ ಬರೈಯಾ ತಿಳಿಸಿದ್ದಾರೆ.
‘‘ಇನ್ನೊಂದು ಜಾತಿಗೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದ ತನ್ನ ಪುತ್ರಿಯ ಬಗ್ಗೆ ದೀಪಕ್ ರಾಥೋಡ್ ತ್ರೀವ್ರ ಆಕ್ರೋಶಿತನಾಗಿದ್ದ. ಈ ಹಿನ್ನೆಲೆಯಲ್ಲಿ ಆತ ಆಕೆಯನ್ನು ಕಿರಿಯ ಪುತ್ರಿಯ ಎದುರಿನಲ್ಲೇ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಅಲ್ಲದೆ, ಆಕೆಯ ದಾರಿ ಹಿಡಿದರೆ ನಿನಗೂ ಇದೇ ಗತಿ ಎಂದು ಕಿರಿಯ ಪುತ್ರಿಗೆ ಬೆದರಿಕೆ ಒಡ್ಡಿದ್ದಾನೆ’’ ಎಂದು ಮಿಹಿರ್ ಬೆರೈಯಾ ಹೇಳಿದ್ದಾರೆ.
ಅನಂತರ ದೀಪಕ್ ರಾಥೋಡ್ ಪುತ್ರಿಯ ಮೃತದೇಹದ ಅಂತ್ಯಕ್ರಿಯೆಯನ್ನು ಗ್ರಾಮದ ಚಿತಾಗಾರದಲ್ಲಿ ರಹಸ್ಯವಾಗಿ ನಡೆಸಿದ್ದಾನೆ. ಇದಕ್ಕೆ ತನ್ನ ಸಹೋದರ ಲಾಲ್ಜಿ ರಾಥೋಡ್ ನ ನೆರವು ಪಡೆದುಕೊಂಡಿದ್ದಾನೆ.
ದೀಪಕ್ ರಾಥೋಡ್ನ ಮೃತ ಪತ್ನಿಯ ಸಂಬಂಧಿಕರು ಆತನ ಪುತ್ರಿಯ ಬಗ್ಗೆ ಪ್ರಶ್ನಿಸಿದಾಗ, ದೀಪಕ್ ಆಕೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಆದರೆ, ಇತರ ಪ್ರಶ್ನೆಗಳಿಗೆ ಆತ ತೃಪ್ತಿಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯುವತಿಯ ಹತ್ಯೆ ಆರೋಪದಲ್ಲಿ ದೀಪಕ್ ರಾಥೋಡ್ ಹಾಗೂ ಆತನ ಸಹೋದರ ಲಾಲ್ಜಿ ರಾಥೋಡ್ ನನ್ನು ಬಂಧಿಸಲಾಗಿದೆ ಎಂದು ಮಿಹಿರ್ ಬರೈಯಾ ತಿಳಿಸಿದ್ದಾರೆ.