ಗುಜರಾತ್ | ಉತ್ಖನನ ಸ್ಥಳದಲ್ಲಿ ಮಣ್ಣು ಕುಸಿತ ; ಐಐಟಿ ದಿಲ್ಲಿಯ ಪಿಎಚ್ ಡಿ ವಿದ್ಯಾರ್ಥಿನಿ ಮೃತ್ಯು
PC : hindustantimes.com
ಗಾಂಧಿನಗರ : ಗುಜರಾತ್ನಲ್ಲಿರುವ ಹರಪ್ಪಾ ನಾಗರಿಕತೆಗೆ ಸಂಬಂಧಿಸಿದ ಪುರಾತತ್ವ ನಿವೇಶವಾದ ಲೋಥಾಲ್ ಸಮೀಪ ಬುಧವಾರ ಸಂಶೋಧನೆ ನಡೆಸುತ್ತಿರುವಾಗ ಮಣ್ಣು ಕುಸಿದು ಐಐಟಿ ದಿಲ್ಲಿಯ ಪಿಎಚ್ಡಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಮೃತಪಟ್ಟ ವಿದ್ಯಾರ್ಥಿನಿಯನ್ನು ಸುರಭಿ ವರ್ಮಾ (23) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐಐಟಿ ಗಾಂಧಿನಗರದ ಪುರಾತತ್ವ ವಿಜ್ಞಾನಗಳ ಕೇಂದ್ರದ ಆಕೆಯ ಪ್ರಾದ್ಯಾಪಕ ಹಾಗೂ ಇಬ್ಬರು ಸಂಶೋಧಕರು ಗಾಯಗೊಂಡಿದ್ದಾರೆ.
ಐಐಟಿ ದಿಲ್ಲಿಯ ಸಹಾಯಕ ಪ್ರಾದ್ಯಾಪಕ ಯಮ ದೀಕ್ಷಿತ್, ಐಐಟಿ ಗಾಂಧಿನಗರದ ಸಂಶೋಧಕರಾದ ವಿ.ಎನ್. ಪ್ರಭಾಕರ್ ಹಾಗೂ ಶಿಖಾ ರಾಯ್ ಅವರನ್ನು ಒಳಗೊಂಡ ಸುರಭಿ ವರ್ಮಾ ಅವರ ತಂಡ ಭೂಮಿಯ ಹಿಂದಿನ ಹವಾಮಾನದ ಬಗ್ಗೆ ಅಧ್ಯಯನ ನಡೆಸಲು ಮಣ್ಣಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಹ್ಮದಾಬಾದ್ನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಲೋಥಾಲ್ನ ಮಖ್ಯ ಸಂರಕ್ಷಿತ ಪ್ರದೇಶದ ಹೊರಗೇ ಈ ಉತ್ಖನನ ಸ್ಥಳವಿದೆ. ಶಿಥಿಲವಾದ ಅತಿಥಿ ಗೃಹಗಳ ಸಮೀಪ 10 ಅಡಿ ಹೊಂಡ ತೋಡಲು ಸಂಶೋಧಕರ ಗುಂಪು ಅಗೆಯುವ ಯಂತ್ರವನ್ನು ಬಳಸಿದ್ದರು. ಯಂತ್ರ ಅಗೆಯುವಾಗ ಸಡಿಲ ಹಾಗೂ ನೀರು ನಿಂತ ಮಣ್ಣು ಕುಸಿದು ವರ್ಮಾ ಹಾಗೂ ದೀಕ್ಷಿತ್ ಸಮಾಧಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುರಭಿ ವರ್ಮಾ ಸ್ಥಳದಲ್ಲೇ ಮೃತಪಟ್ಟರು. ದೀಕ್ಷಿತ್ ಅವರನ್ನು ರಕ್ಷಿಸಿ ಮೊದಲು ಬಾಗೋಡಾರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಗಾಂಧಿನಗರದಲ್ಲಿರುವ ಅಪೊಲೊ ಆಸ್ಪತ್ರೆಗೆ ಶಿಫಾರಸು ಮಾಡಿದರು ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ಓಂ ಪ್ರಕಾಶ್ ಜಾಟ್ ತಿಳಿಸಿದ್ದಾರೆ.