ಗುಜರಾತ್: ದ್ರವ ರೂಪದ ಕಬ್ಬಿಣ ಬಿದ್ದು ಇಬ್ಬರು ಕಾರ್ಮಿಕರು ಸಾವು
photo:thewire.in
ಅಹ್ಮದಾಬಾದ್: ಗುಜರಾತ್ ನ ಭಾವನಗರದ ಸಿಹೋರೆಯ ಕಾರ್ಖಾನೆಯೊಂದರಲ್ಲಿ ಬುಧವಾರ ರಾತ್ರಿ ಕುಲುಮೆಯಿಂದ ದ್ರವ ರೂಪದ ಕಬ್ಬಿಣ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಸಿಹೋರೆಯಲ್ಲಿರುವ ರುದ್ರಾ ಗ್ಲೋಬಲ್ ಇನ್ಫ್ರಾ ಲಿಮಿಟೆಡ್ ನ ಘಟಕದ ಕುಲುಮೆಯಲ್ಲಿ ಕಬ್ಬಿಣ ಕರಗುತ್ತಿರುವ ಸಂದರ್ಭ ಈ ಘಟನೆ ನಡೆದಿದೆ. ಕುಲುಮೆಯಲ್ಲಿದ್ದ ದ್ರವ ರೂಪದ ಕಬ್ಬಿಣ ಕಾರ್ಮಿಕರ ಮೇಲೆ ಬಿತ್ತು. ಇದರಿಂದ ಐವರು ಕಾರ್ಮಿಕರಿಗೆ ಗಂಭೀರ ಸುಟ್ಟ ಗಾಯಗಳಾದವು. ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ. ಇತರ ನಾಲ್ವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಮತ್ತೋರ್ವ ಸಾವನ್ನಪ್ಪಿದ ಎಂದು ಮೂಲಗಳು ತಿಳಿಸಿವೆ.
ಈಗ ಮೂವರು ಕಾರ್ಮಿಕರಿಗೆ ಭಾವನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾರ್ಖಾನೆಯ ಅಧಿಕಾರಿ ತಿಳಿಸಿದ್ದಾರೆ.
‘‘ದುರ್ಘಟನೆ ನಡೆದ ಸುದ್ದಿ ತಿಳಿದ ಕೂಡಲೇ ಕಂಪೆನಿಯ ಇತರ ಕಾರ್ಮಿಕರು ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿದರು. ಸಾವನ್ನಪ್ಪಿದವರ ಮೃತದೇಹವನ್ನು ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡಿದರು’’ ಎಂದು ಸಿಹೋರೆ ತಾಲೂಕಿನ ಕಂದಾಯ ಅಧಿಕಾರಿ ಆರ್.ಜಿ. ಪ್ರಜಾಪತಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ದುರಂತ ಹೇಗೆ ಸಂಭವಿಸಿತು ಹಾಗೂ ಕಾರ್ಮಿಕರು ಯಾವ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಕಂಪೆನಿಯ ನಿರ್ಲಕ್ಷ್ಯ ಕಂಡು ಬಂದರೆ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಇದು ಗುಜರಾತ್ ನ ಕಾರ್ಖಾನೆಗಳಲ್ಲಿ ಸಂಭವಿಸುತ್ತಿರುವ ಮೊದಲ ಘಟನೆ ಅಲ್ಲ. ಕಳೆದ ಎರಡು ತಿಂಗಳಿಂದ ನಡೆದ ಇಂತಹ ಹಲವು ಘಟನೆಗಳಿಂದ ಬಡ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.