ಪ್ರಧಾನಿ ಕಚೇರಿಯ ಅಧಿಕಾರಿಯಂತೆ ನಟಿಸಿ ಗೆಳೆಯನ ಮಕ್ಕಳಿಗೆ ಶಾಲಾ ದಾಖಲಾತಿ ಮಾಡಿಸಿಕೊಂಡಿದ್ದ ಗುಜರಾತ್ ವ್ಯಕ್ತಿಯ ಬಂಧನ
ಸಾಂದರ್ಭಿಕ ಚಿತ್ರ
ಅಹಮದಾಬಾದ್: ಗುಜರಾತ್ನ ವಡೋದರಾ ನಗರದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಇಬ್ಬರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಪ್ರಧಾನಿ ಕಚೇರಿಯ ಅಧಿಕಾರಿಯಂತೆ ನಟಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆರೋಪಿಯನ್ನು ಮಯಾಂಕ್ ತಿವಾರಿ ಎಂದು ಗುರುತಿಸಲಾಗಿದ್ದು, ಹೊಸದಿಲ್ಲಿಯ ಪ್ರಧಾನಮಂತ್ರಿ ಕಚೇರಿಯಲ್ಲಿ ಕಾರ್ಯತಂತ್ರದ ಸಲಹಾ ನಿರ್ದೇಶಕ ಮತ್ತು ಸರ್ಕಾರಿ ಸಲಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಈತ ವಂಚಿಸುತ್ತಿದ್ದ ಎಂದು ವಡೋದರಾದ ವಘೋಡಿಯಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆರೋಪಿ ತಿವಾರಿ ಮಾರ್ಚ್ 2022 ರಲ್ಲಿ ಶಾಲೆಯೊಂದರ ನಿರ್ದೇಶಕ ಹಾಗೂ ಟ್ರಸ್ಟಿಯನ್ನು ಸಂಪರ್ಕಿಸಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕಾರ್ಯತಂತ್ರ ಸಲಹೆಗಾರ ಎಂದು ಗುರುತಿಸಿಕೊಂಡಿದ್ದು, ತನ್ನ ಸ್ನೇಹಿತನ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶಾತಿ ನೀಡಲು ಸಹಾಯವನ್ನು ಕೋರಿದ್ದ. ಅಲ್ಲದೆ, ತನ್ನ ಸ್ನೇಹಿತನನ್ನು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿರುವ ಮಿರ್ಜಾ ಬೇಗ್ ಎಂದು ಪರಿಚಯಿಸಿದ್ದ. ಮಿರ್ಜಾ ಪುಣೆಯಿಂದ ವಡೋದರಾಗೆ ವರ್ಗಾವಣೆಯಾಗುತ್ತಿದ್ದು, ಮಕ್ಕಳಿಗೆ ಶಾಲೆಯಲ್ಲಿ ದಾಖಲಾತಿ ಮಾಡುವಂತೆ ಟ್ರಸ್ಟಿ ಮತ್ತು ನಿರ್ದೇಶಕರನ್ನು ಮನವೊಲಿಸಿದ್ದಾರೆ. ಇದಕ್ಕೆ ಬದಲಾಗಿ, ತನ್ನ ಪ್ರಧಾನಿ ಕಾರ್ಯಾಲಯದ ಪ್ರಭಾವ ಬಳಸಿ ಶಿಕ್ಷಣ ಸಂಸ್ಥೆಗೆ ವಿವಿಧ ಯೋಜನೆಗಳನ್ನು ಪಡೆಯಲು ಸಹಾಯ ಮಾಡುವುದಾಗಿ ನಂಬಿಸಿದ್ದ. ಆರೋಪಿ ದೊಡ್ಡ ಮೊತ್ತದ ವಂಚನೆ ಮಾಡುವ ಉದ್ದೇಶದಿಂದ ಶಾಲೆಯ ಟ್ರಸ್ಟಿ ಹಾಗೂ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಅದಾಗ್ಯೂ, ತಿಂಗಳುಗಳ ನಂತರ ಟ್ರಸ್ಟಿ ಹಾಗೂ ನಿರ್ದೇಶಕರಿಗೆ ತಿವಾರಿ ಬಗ್ಗೆ ಸಂದೇಹ ಬಂದಿದ್ದು, ಆತನ ಬಗ್ಗೆ ವಿಚಾರಿಸಿದ್ದಾರೆ. ತಿವಾರಿ ಪಿಎಂಒ ಅಧಿಕಾರಿಯಲ್ಲ ಎಂದು ಟ್ರಸ್ಟಿಗಳಿಗೆ ನಂತರ ತಿಳಿದುಬಂದಿದೆ. ಶಾಲೆಯ ಆಡಳಿತ ಮಂಡಳಿಯ ದೂರಿನ ಮೇರೆಗೆ ವಘೋಡಿಯಾ ಪೊಲೀಸರು ಶುಕ್ರವಾರ ತಿವಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸ್ನೇಹಿತರಿಗೆ ಸಹಾಯ ಮಾಡಲು ನಕಲಿ ಗುರುತನ್ನು ಬಳಸಿದ್ದೇನೆ ಎಂದು ತನಿಖೆಯ ಸಮಯದಲ್ಲಿ ತಿವಾರಿ ಒಪ್ಪಿಕೊಂಡಿರುವುದಾಗಿ ವಡೋದರಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
"ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತನ್ನ ಸ್ನೇಹಿತರಿಗೆ ಆಮ್ಲಜನಕ ಮತ್ತು ಹಾಸಿಗೆಗಳನ್ನು ಪಡೆಯಲು ನಕಲಿ ಗುರುತನ್ನು ಬಳಸಲು ಪ್ರಾರಂಭಿಸಿದ್ದರು. ಅದು ಯಶಸ್ವಿಯಾದಾಗ ಅದೇ ಗುರುತನ್ನು ಬಳಸಿ ಇತರೆ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಅಹಮದಾಬಾದ್ ನಿವಾಸಿ ಕಿರಣ್ ಪಟೇಲ್ ಎಂಬಾತ ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್ನಲ್ಲಿ ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಹಿರಿಯ ಅಧಿಕಾರಿಯಾಗಿ ತನ್ನನ್ನು ಬಿಂಬಿಸಿದ್ದಕ್ಕಾಗಿ ಬಂಧಿಸಲಾಗಿತ್ತು.