ಪತ್ನಿಯನ್ನು ಲಿವ್ ಇನ್ ಸಂಗಾತಿಯಿಂದ ಬೇರ್ಪಡಿಸಿದ ಪತಿ; ಒಂದಾಗಿಸಿದ ಕೋರ್ಟ್!
ಅಹ್ಮದಾಬಾದ್: ಪತ್ನಿಯನ್ನು ಪರಿತ್ಯಕ್ತ ಪತಿ ಲಿವ್ ಇನ್ ಸಂಗಾತಿಯಿಂದ ಬೇರ್ಪಡಿಸಿದರೆ, ಗುಜರಾತ್ ಕೋರ್ಟ್ ಮತ್ತೆ ಲಿವ್ ಇನ್ ಸಂಗಾತಿಯ ಜತೆಗೂಡಿಸಿದ ಅಪರೂಪದ ಪ್ರಕರಣ ವರದಿಯಾಗಿದೆ.
ಲಿವ್ ಇನ್ ಸಂಗಾತಿಯನ್ನು ಮಾಜಿ ಪತಿ ಬಲವಂತದಿಂದ ಕರೆದೊಯ್ದು ತವರು ಮನೆಯಲ್ಲಿ ಇರಿಸಿದ್ದ ಎಂದು ಆಪಾದಿಸಿ ಕಾನೂನು ರಕ್ಷಣೆಗೆ ಕೋರಿದ್ದ ಪ್ರಕರಣದಲ್ಲಿ ಲಿವ್ ಇನ್ ಸಂಗಾತಿಗಳ ಪರವಾಗಿ ಕೋರ್ಟ್ ತೀರ್ಪು ನೀಡಿದೆ.
ಮಹಿಳೆ ವೈವಾಹಿಕ ವೈಮನಸ್ಯದಿಂದ ಪತಿಯನ್ನು ತೊರೆದು ತವರು ಮನೆ ಸೇರಿದ್ದರು ಮತ್ತು ಮಗನನ್ನು ಪತಿಯ ಬಳಿಯೇ ಬಿಟ್ಟು ಹೋಗಿದ್ದರು. ಬಳಿಕ ಹೊಸ ಲಿವ್ ಇನ್ ಸಂಗಾತಿಯನ್ನು ಭೇಟಿ ಮಾಡಿ ಅಮ್ರೇಲಿ ಜಿಲ್ಲೆಯ ಖಾಂಭಾ ಪಟ್ಟಣದಲ್ಲಿ ಈ ವರ್ಷದ ಜನವರಿಯಿಂದ ವಾಸವಿದ್ದರು.
ನ್ಯಾಯಮೂರ್ತಿಗಳಾದ ಎ.ವೈ.ಕೋಗ್ಜೆ ಮತ್ತು ಎಸ್.ಜೆ.ದವೆ ಅವರನ್ನೊಳಗೊಂಡ ವಿಭಾಗೀಯ ಪೀಠ ಮಹಿಳೆಯನ್ನು ನ್ಯಾಯಾಲಯಕ್ಕೆ ಕರೆ ತರುವಂತೆ ಆದೇಶಿಸಿತ್ತು. ಎಪ್ರಿಲ್ 8ರಂದು ನ್ಯಾಯಾಧೀಶರ ಮುಂದೆ ಹಾಜರಾದ ಮಹಿಳೆ, ತನ್ನ ಲಿವ್ ಇನ್ ಸಂಗಾತಿಯ ಜತೆ ಮುಂದುವರಿಯುವ ಅಪೇಕ್ಷೆ ವ್ಯಕ್ತಪಡಿಸಿದ್ದರು. "ಹೈಕೋರ್ಟ್ ಹೇಬಿಸ್ ಕಾರ್ಪಸ್ ಪರಿದಿಯಲ್ಲಿರುವುದರಿಂದ ಮಹಿಳೆಯ ಇಂಗಿತವನ್ನು ಮಾನ್ಯ ಮಾಡಿದ್ದು, ಅರ್ಜಿದಾರರ ಜತೆ ತೆರಳಲು ಅನುಮತಿ ನೀಡಿದೆ" ಎಂದು ಲಿವ್ ಇನ್ ಸಂಗಾತಿಯ ಪರ ವಕೀಲ ರತಿನ್ ರಾವಲ್ ಹೇಳಿದ್ದಾರೆ.
ಈ ಪ್ರಕರಣದ ಹಿಂಸಾತ್ಮಕ ಇತಿಹಾಸದ ಹಿನ್ನೆಲೆಯಲ್ಲಿ ವಕೀಲರು, ಲಿವ್ ಇನ್ ಸಂಗಾತಿಗಳಿಗೆ ಪೊಲೀಸ್ ರಕ್ಷಣೆ ಕೋರಿದ್ದಾರೆ. ಮಹಿಳೆ ತನ್ನ ಸಂಗಾತಿಯ ಜತೆ ಸೇರಿಕೊಳ್ಳುವವರೆಗೂ ಪೊಲೀಸ್ ರಕ್ಷಣೆ ನೀಡುವಂತೆ ಕೋರ್ಟ್ ಆದೇಶ ನೀಡಿತು.