ಗುಜರಾತ್ | ಪಟಾಕಿ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ; 17 ಜನರು ಮೃತ್ಯು

ಸಾಂದರ್ಭಿಕ ಚಿತ್ರ | PC : PTI
ಅಹ್ಮದಾಬಾದ್: ಗುಜರಾತಿನ ಬನಾಸ್ಕಾಂತಾ ಜಿಲ್ಲೆಯ ದೀಸಾದಲ್ಲಿಯ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ದೀಸಾ ನಗರಸಭೆಯ ಅಗ್ನಿಶಾಮಕ ದಳ ಮತ್ತು 108 ಆ್ಯಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ.
ಪ್ರಾಥಮಿಕ ಮಾಹಿತಿಯಂತೆ ಕಾರ್ಖಾನೆಯ ಗನ್ಪೌಡರ್ ಘಟಕದಲ್ಲಿ ಸಂಭವಿಸಿದ್ದ ಭಾರೀ ಸ್ಫೋಟದಿಂದಾಗಿ ಬೆಂಕಿ ಹತ್ತಿಕೊಂಡಿತ್ತು ಎಂದು ಶಂಕಿಸಲಾಗಿದೆ.
ಸ್ಫೋಟದ ತೀವ್ರತೆಗೆ ಮಾನವ ಅಂಗಾಂಗಗಳು 200 ಮೀ.ಗಷ್ಟು ದೂರ ಹಾರಿ ಬಿದ್ದಿದ್ದು, ಪಕ್ಕದ ಗದ್ದೆಗಳಲ್ಲಿ ಹಲವಾರು ದೇಹಗಳ ಭಾಗಗಳು ಪತ್ತೆಯಾಗಿವೆ.
ದುರಂತ ಸಂಭವಿಸಿದಾಗ ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಮತ್ತು ಎಷ್ಟು ಜನರು ಸುರಕ್ಷಿತರಾಗಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳವು ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸ್ಫೋಟದಿಂದಾಗಿ ಕಾರ್ಖಾನೆ ಕಟ್ಟಡ ಭಾಗಶಃ ಕುಸಿದು ಬಿದ್ದಿದ್ದು, ರಕ್ಷಣಾ ತಂಡಗಳು ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿವೆ. ಗಾಯಾಳುಗಳನ್ನು ದೀಸಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ರಭಸಕ್ಕೆ ಕಾರ್ಖಾನೆಯ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಕಾರ್ಮಿಕರ ಕುಟುಂಬಗಳೂ ಕಾರ್ಖಾನೆಯ ಆವರಣದಲ್ಲಿ ವಾಸವಾಗಿವೆ.