ನಮಾಝ್ ವಿವಾದದ ಬಳಿಕ ಹಾಸ್ಟೆಲ್ ತೆರವುಗೊಳಿಸುವಂತೆ ಏಳು ವಿದೇಶಿ ವಿದ್ಯಾರ್ಥಿಗಳಿಗೆ ಗುಜರಾತ್ ವಿವಿ ಸೂಚನೆ
PC | NDTV
ಅಹ್ಮದಾಬಾದ್: ಅವಧಿ ಮೀರಿ ವಾಸ್ತವ್ಯಕ್ಕಾಗಿ ಗುಜರಾತ್ ವಿವಿಯ ಹಾಸ್ಟೆಲ್ ಕೊಠಡಿಗಳನ್ನು ತೆರವುಗೊಳಿಸುವಂತೆ ಪೂರ್ವ ಆಫ್ರಿಕಾದ ಓರ್ವ ಮತ್ತು ಅಫ್ಘಾನಿಸ್ತಾನದ ಆರು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೋರ್ವರು ರವಿವಾರ ತಿಳಿಸಿದರು.
ಮಾ.16ರಂದು ವಿವಿ ಆವರಣದಲ್ಲಿ ನಮಾಝ್ ಸಲ್ಲಿಸಿದ್ದಕ್ಕಾಗಿ ಕೆಲವು ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯ ಬಳಿಕ ಅಫ್ಘಾನ್ ಮತ್ತು ಗಾಂಬಿಯಾದ ನಿಯೋಗವೊಂದು ವಿವಿಗೆ ಭೇಟಿ ನೀಡಿ ಸುರಕ್ಷಾ ಕ್ರಮಗಳ ಕುರಿತು ಕುಲಪತಿಗಳೊಂದಿಗೆ ಮಾತುಕತೆ ನಡೆಸಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿವಿ ಕುಲಪತಿ ನೀರಜಾ ಗುಪ್ತಾ ಅವರು,‘ಅಫ್ಘಾನಿಸ್ತಾನದ ಆರು ವಿದ್ಯಾರ್ಥಿಗಳು ಮತ್ತು ಪೂರ್ವ ಆಫ್ರಿಕಾದ ಓರ್ವ ವಿದ್ಯಾರ್ಥಿ ಅವಧಿ ಮೀರಿ ವಾಸವಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದ ಬಳಿಕ ಹಾಸ್ಟೆಲ್ ಕೊಠಡಿಗಳನ್ನು ತೆರವುಗೊಳಿಸುವಂತೆ ಅವರಿಗೆ ಸೂಚಿಸಲಾಗಿದೆ. ಅವರು ತಮ್ಮ ವ್ಯಾಸಂಗಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಕೆಲವು ಆಡಳಿತಾತ್ಮಕ ಕಾರ್ಯಗಳು ಬಾಕಿಯಿರುವುದರಿಂದ ಮಾಜಿ ವಿದ್ಯಾರ್ಥಿಗಳಾಗಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಅವರು ಹಾಸ್ಟೆಲ್ ನಲ್ಲಿ ವಾಸವನ್ನು ಮುಂದುವರಿಸುವ ಅಗತ್ಯವಿಲ್ಲ,ಅವರು ತಮ್ಮ ದೇಶಗಳಿಗೆ ಸುರಕ್ಷಿತವಾಗಿ ಮರಳಲು ವಿವಿಯು ವ್ಯವಸ್ಥೆ ಮಾಡಿದೆ. ಮಾಜಿ ವಿದ್ಯಾರ್ಥಿಗಳನ್ನು ನಮ್ಮ ಹಾಸ್ಟೆಲ್ ನಲ್ಲಿ ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ. ಆಯಾ ದೇಶಗಳ ದೂತಾವಾಸಗಳಿಗೆ ನಾವು ಮಾಹಿತಿ ನೀಡಿದ್ದೇವೆ ಮತ್ತು ಹಾಸ್ಟೆಲ್ ತೆರವುಗೊಳಿಸುವಂತೆ ಅವೂ ಈ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿವೆ ’ ಎಂದು ತಿಳಿಸಿದರು.
ಗುಜರಾತ್ ವಿವಿಯಲ್ಲಿ 300ಕ್ಕೂ ಅಧಿಕ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಮಾ.16ರಂದು ರಾತ್ರಿ ಹಾಸ್ಟೆಲ್ ಗೆ ನುಗ್ಗಿದ್ದ ಸುಮಾರು ಎರಡು ಡಜನ್ನಷ್ಟು ಜನರು ಹಾಲಿ ಆಚರಣೆಯಲ್ಲಿರುವ ರಮಝಾನ್ ಮಾಸದಲ್ಲಿ ಹಾಸ್ಟೆಲ್ ನ ಬ್ಲಾಕ್ವೊಂದರಲ್ಲಿ ನಮಾಝ್ ನಡೆಸಿದ್ದಕ್ಕಾಗಿ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯ ಬಳಿಕ ಗಾಯಗೊಂಡಿದ್ದ ಶ್ರೀಲಂಕಾ ಮತ್ತು ತಜಿಕಿಸ್ತಾನದ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.