ಚತ್ತೀಸ್ಗಢದ ಸುಕ್ಮಾದಲ್ಲಿ ಗುಂಡಿನ ಕಾಳಗ | 10 ಮಂದಿ ನಕ್ಸಲೀಯರು ಮೃತ್ಯು
PC : PTI
ರಾಯಪುರ : ಚತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ 10 ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ.
ಸುಕ್ಮಾ ಜಿಲ್ಲೆಯ ದಕ್ಷಿಣ ವಿಭಾಗದಲ್ಲಿ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್ಜಿ) ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಕಾಳಗ ನಡೆಯಿತು. ಈ ಗುಂಡಿನ ಕಾಳಗದಲ್ಲಿ 10 ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ. ಇನ್ಸಾಸ್, ಎಕೆ 47, ಎಸ್ಎಲ್ಆರ್ ಹಾಗೂ ಇತರ ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಬಸ್ತಾರ್ನ ಐಜಿಪಿ ಪಿ. ಸುಂದರರಾಜ್ ತಿಳಿಸಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಹಾಗೂ ಡಿಆರ್ಜಿ ಜಂಟಿಯಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ಭೆಜ್ಜಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಮಾವೋವಾದಿಗಳು ಮುಖಾಮುಖಿಯಾದರು ಅನಂತರ ಗುಂಡಿನ ಕಾಳಗ ನಡೆಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಕೊಂಟಾ ಹಾಗೂ ಕಿಸ್ತಾರಾಮ್ ಪ್ರದೇಶ ಸಮಿತಿಗಳ ಮಾವೋವಾದಿಗಳು ಇರುವ ಕುರಿತು ನಿರ್ದಿಷ್ಟ ಮಾಹಿತಿ ಸ್ವೀಕರಿಸಿದ ಬಳಿಕ ಸಿಆರ್ಪಿಎಫ್ ಹಾಗೂ ಡಿಆರ್ಜಿಯ ತಂಡ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಮುಖಾಮುಖಿಯಾದ ನಕ್ಸಲೀಯರೊಂದಿಗೆ ಗುಂಡಿನ ಕಾಳಗ ನಡೆಯಿತು. ಈ ಗುಂಡಿನ ಕಾಳಗದಲ್ಲಿ 10 ಮಂದಿ ನಕ್ಸಲೀಯರು ಹತರಾದರು. ನಕ್ಸಲೀಯರಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿದ್ದುವು. ಆದರೆ, ಭದ್ರತಾ ಪಡೆಗಳು ಮುನ್ನೆಚ್ಚರಿಕೆ ವಹಿಸಿರುವುದರಿಂದ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಸಿಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಯ ಜಯಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಸರಕಾರ ಮಾವೋವಾದಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.