ಗುಂಡಿನ ಕಾಳಗ: ಮಣಿಪುರ ಹಿಂಸಾಚಾರಕ್ಕೆ ಮತ್ತೆರಡು ಬಲಿ
ಗುವಾಹತಿ: ಹಿಂಸಾಪೀಡಿತ ಮಣಿಪುರದಲ್ಲಿ ಮಂಗಳವಾರ ಮತ್ತೆ ಗುಂಡಿನ ಕಾಳಗ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.
ಇಂಫಾಲ ಪಶ್ಚಿಮ ಮತ್ತು ಕಂಗ್ಪೋಕ್ಪಿ ಜಿಲ್ಲೆಗಳ ಆಸುಪಾಸಿನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದೆ. ಗಾಯಾಳುಗಳನ್ನು ರಾಜಧಾನಿ ಇಂಫಾಲದ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿದೆ.
ಗ್ರಾಮ ಸ್ವಯಂಸೇವಕರ ಶಿಬಿರದ ಮೇಲೆ ಅಪರಿಚಿತ ದಾಳಿಕೋರ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸ್ವಲ್ಪ ಕಾಲದವರೆಗೆ ಗುಂಡಿನ ಕಾಳಗ ಮುಂದುವರಿದಿತ್ತು. ಮಹಿಳೆಯರು ಸೇರಿದಂತೆ ಹಲವು ಮಂದಿ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಓಡಿಹೋಗುತ್ತಿರುವ ದೃಶ್ಯ ವೈರಲ್ ವಿಡಿಯೊದಲ್ಲಿ ಕಾಣಿಸುತ್ತಿದೆ. ಅಧಿಕಾರಿಗಳು ಈ ಪ್ರದೇಶಕ್ಕೆ ಹೆಚ್ಚುವರಿ ಭದ್ರತೆಯನ್ನು ವ್ಯವಸ್ಥೆ ಮಾಡಿದ್ದು, ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಕೊನೆಯ ವರದಿಗಳು ಬಂದಾಗಲೂ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ಇಂಫಾಲ ಪಶ್ಚಿಮ ಮತ್ತು ಕಂಗ್ಪೋಕ್ಪಿ ಜಿಲ್ಲೆಗಳು ಜನಾಂಗೀಯ ಸಂಘರ್ಷದಿಂದ ತೀವ್ರ ತೊಂದರೆಗೀಡಾದ ಜಿಲ್ಲೆಗಳು. ಈ ಜಿಲ್ಲೆಗಳು ಮತ್ತು ಆಸುಪಾಸಿನಲ್ಲಿ ಗುಂಡಿನ ದಾಳಿ ಮತ್ತು ದೊಂಬಿಯಂಥ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಏತನ್ಮಧ್ಯೆ ಇಬ್ಬರು ಸಚಿವರು ಸೇರಿದಂತೆ ರಾಜ್ಯದ ಎಲ್ಲ 10 ಮಂದಿ ಕುಕಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಸಂವಿಧಾನದ ನಿಬಂಧನೆಗಳಿಗೆ ಅನುಸಾರವಾಗಿ ಕುಕಿ-ಝೊ ಬುಡಕಟ್ಟು ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿದ್ದಾರೆ.