ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದ್ದಕ್ಕೆ ವಾಟ್ಸ್ ಆ್ಯಪ್ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಿಸಿದ ಗುರುಗ್ರಾಮ ಪೊಲೀಸರು
Photo credit: PTI
ಹರ್ಯಾಣ: ಪ್ರಕರಣವೊಂದರ ತನಿಖೆಗೆ ಸಂಬಂಧಿಸಿ ನಾಲ್ಕು ವಾಟ್ಸ್ ಆ್ಯಪ್ ಖಾತೆಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಹಿನ್ನೆಲೆ ಗುರುಗ್ರಾಮ್ ಪೊಲೀಸರು ವಾಟ್ಸ್ ಆ್ಯಪ್ ನಿರ್ದೇಶಕರು ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಾಟ್ಸಾಪ್ ನಿರ್ದೇಶಕರು ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕ ನೌಕರರು ಹೊರಡಿಸಿದ ಆದೇಶಕ್ಕೆ ಅವಿಧೇಯತೆ ತೋರುವುದು, ಅಪರಾಧಿಯನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸುವುದು ಮತ್ತು ಸಾಕ್ಷ್ಯವಾಗಿ ಸಲ್ಲಿಸಬೇಕಾದ ಯಾವುದೇ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಗಳ ನಾಶಕ್ಕೆ ಸಂಬಂಧಿಸಿದ ಆರೋಪದಡಿಯಲ್ಲಿ ವಾಟ್ಸಾಪ್ ನಿರ್ದೇಶಕರು ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ಗುರುಗ್ರಾಮ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದ ತನಿಖೆಯ ಭಾಗವಾಗಿ ನಾಲ್ವರು ಆರೋಪಿಗಳು ಬಳಸುತ್ತಿದ್ದ ನಂಬರ್ ನ ವಾಟ್ಸಾಪ್ ಮಾಹಿತಿ ಕೋರಿ ಜು.17ರಂದು ಈಮೇಲ್ ಮೂಲಕ ವಾಟ್ಸಾಪ್ ಸಂಸ್ಥೆಗೆ ನೋಟಿಸ್ ಕಳುಹಿಸಲಾಗಿದೆ. ಆದರೆ ವಾಟ್ಸಾಪ್ ಸಂಸ್ಥೆ ಮಾಹಿತಿಯನ್ನು ನೀಡಲು ನಿರಾಕರಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.