ಹೊಸ ವರ್ಷದ ಪಾರ್ಟಿ ಬಳಿಕ ಗುವಾಹತಿ ಐಐಟಿ ವಿದ್ಯಾರ್ಥಿನಿ ನಿಗೂಢ ಸಾವು
Photo: twitter.com/ndtv
ಗುವಾಹತಿ: ಇಲ್ಲಿನ ಐಐಟಿ ಕ್ಯಾಂಪಸ್ ನ ಹೊರಗೆ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಮೃತಪಟ್ಟಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ತೆಲಂಗಾಣದ ಕರೀಂ ನಗರ ನಿವಾಸಿ ಮುಲ್ಲಾರಿ ಐಶ್ವರ್ಯ (21) ಎಂದು ಗುರುತಿಸಲಾಗಿದೆ. ಹೊಸವರ್ಷದ ಪಾರ್ಟಿ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಆ ವೇಳೆಗಾಗಲೇ ವಿದ್ಯಾರ್ಥಿನಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ನಾಲ್ಕನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಈಕೆ, ಹುಟ್ಟೂರಿನಿಂದ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಇದೇ ಸಂಸ್ಥೆಯ ಇತರ ಮೂವರು ಸ್ನೇಹಿತರ ಜತೆ ಗುವಾಹತಿಯ ಪಬ್ ಗೆ ಹೊಸ ವರ್ಷದ ಪಾರ್ಟಿಗಾಗಿ ತೆರಳಿದ್ದಳು.
ಪಾರ್ಟಿ ತಡರಾತ್ರಿವರೆಗೆ ಮುಂದುವರಿದಿದ್ದು, ಆ ವೇಳೆಗೆ ಕ್ಯಾಂಪಸ್ ಮುಚ್ಚಿದ್ದ ಹಿನ್ನೆಲೆಯಲ್ಲಿ, ಐಶ್ವರ್ಯ ಹಾಗೂ ಆಕೆಯ ಇಬ್ಬರು ಸ್ನೇಹಿತರು ಹಾಗೂ ಸ್ನೇಹಿತೆ ಪಬ್ ಬಳಿಯ ಹೋಟೆಲ್ ಗೆ ತೆರಳಿ, ಅಲ್ಲಿ ತಂಗಿದ್ದು, ಮರುದಿನ ಮುಂಜಾನೆ ಐಐಟಿ ಕ್ಯಾಂಪಸ್ ಗೆ ಆಗಮಿಸಿದ್ದರು ಎಂದು ಹೋಟೆಲ್ ಸಿಬ್ಬಂದಿ ವಿವರಿಸಿದ್ದಾರೆ.
ಕ್ಯಾಂಪಸ್ ಗೆ ಆಗಮಿಸಿದ ಕೆಲವೇ ಸಮಯದಲ್ಲಿ ಐಶ್ವರ್ಯಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಗುವಾಹತಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಐಶ್ವರ್ಯಾ ಸ್ನೇಹಿತೆಯರನ್ನು ವಿಚಾರಣೆಗೆ ಒಳಪಡಿಸಿ, ಬಿಡುಗಡೆ ಮಾಡಲಾಗಿದೆ. ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯ ಕುಟುಂಬಕ್ಕೆ ಮತ್ತು ಗುವಾಹತಿ ಐಐಟಿ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಗುವಾಹತಿ ಡಿಸಿಪಿ ಅಮಿತಾಬ್ ಬಸುಮತರಿ ಹೇಳಿದ್ದಾರೆ.