ಫೈಟರ್ ಜೆಟ್ ಬಿಡಿಭಾಗ ಖರೀದಿ ವೇಳೆ ಎಡವಿದ ಎಚ್ಎಎಲ್ : 55 ಲಕ್ಷ ರೂ. ಸೈಬರ್ ವಂಚನೆ

ಸಾಂದರ್ಭಿಕ ಚಿತ್ರ (PTI)
ಕಾನ್ಪುರ : ಫೈಟರ್ ಜೆಟ್ ಬಿಡಿಭಾಗ ಖರೀದಿ ವೇಳೆ ಸೈಬರ್ ವಂಚನೆಯಿಂದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) 55 ಲಕ್ಷ ರೂ. ಕಳೆದುಕೊಂಡಿದೆ.
ಕಾನ್ಪುರದ ಎಚ್ಎಎಲ್ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ಸಿಂಗ್ ನೀಡಿದ ದೂರಿನಂತೆ ಈ ಕುರಿತು ಕಾನ್ಪುರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
2024ರ ಮೇಯಲ್ಲಿ ಎಚ್ಎಎಲ್ ಯುಎಸ್ ಮೂಲದ ಕಂಪೆನಿ ಜೊತೆ ಮೂರು ಯುದ್ಧ ವಿಮಾನದ ಬಿಡಿ ಭಾಗಗಳಿಗೆ ದರ ಪಟ್ಟಿಯನ್ನು ಕೇಳಿದೆ. ಕಂಪೆನಿಯು ಎಚ್ಎಎಲ್ ಜೊತೆ ಇಮೇಲ್ ಸಂಭಾಷಣೆ ನಡೆಸಿತು. ಆದರೆ ಈ ಮಧ್ಯೆ ನಕಲಿ ಇಮೇಲ್ ಸಂಭಾಷಣೆ ಮಧ್ಯಪ್ರವೇಶಿಸಿತು.
ಈ ಕುರಿತು ಡಿಸಿಪಿ ಅಂಜಲಿ ವಿಶ್ವಕರ್ಮ ಪ್ರತಿಕ್ರಿಯಿಸಿ, ಎಚ್ಎಎಲ್ ವಿಮಾನದ ಬಿಡಿಭಾಗಗಳನ್ನು ಖರೀದಿಸಲು ಯುಎಸ್ ಕಂಪೆನಿಯಾದ ಪಿಎಸ್ ಇಂಜಿನಿಯರಿಂಗ್ ಇನ್ ಕಾರ್ಪೊರೇಟೆಡ್ ಅನ್ನು ಸಂಪರ್ಕಿಸಿದೆ. ಅಧಿಕೃತ ಇಮೇಲ್ ಮೂಲಕ ಸಂಭಾಷಣೆ ನಡೆಯಿತು. ಆದರೆ, ಆ ಬಳಿಕ ನಕಲಿ ಇಮೇಲ್ ಮಧ್ಯಪ್ರವೇಶಿಸಿದೆ. ಎರಡು ಐಡಿಗಳ ನಡುವೆ ʼಇʼ ಎಂಬ ಒಂದೇ ಒಂದು ಅಕ್ಷರದ ವ್ಯತ್ಯಾಸವಿತ್ತು. HAL ಸುಮಾರು 55 ಲಕ್ಷ ರೂಪಾಯಿಗಳನ್ನು ಸೈಬರ್ ವಂಚಕರ ಖಾತೆಗೆ ಜಮೆ ಮಾಡಿದೆ. ಮತ್ತೊಂದು ಯುಎಸ್ ಮೂಲದ ಕಂಪೆನಿ ಎಚ್ಎಎಲ್ಗೆ ವಂಚಿಸಿದೆಯೇ ಅಥವಾ ಅದು ಭಾರತೀಯ ಸಂಸ್ಥೆಯೇ ಎಂಬುದು ಸ್ಪಷ್ಟವಾಗಿಲ್ಲಎಂದು ಹೇಳಿದರು.
ಎಚ್ಎಎಲ್ ಸಣ್ಣ ತಪ್ಪನ್ನು ನಿರ್ಲಕ್ಷಿಸಿದ್ದರಿಂದ ಸರಿಯಾದ ಮಾರಾಟಗಾರರ ಖಾತೆಯಲ್ಲದ ತಪ್ಪು ಖಾತೆಗೆ ಪಾವತಿ ಮಾಡಿದೆ. ಆದರೆ, ನೈಜ ಮಾರಾಟಗಾರರಾದ ಪಿಎಸ್ ಇಂಜಿನಿಯರಿಂಗ್ ಇನ್ ಕಾರ್ಪೊರೇಟೆಡ್ ಯಾವುದೇ ಪಾವತಿಯನ್ನು ಸ್ವೀಕರಿಸಲಿಲ್ಲ ಎಂದು ಹೇಳಿದಾಗ ಈ ವಂಚನೆ ಬೆಳಕಿಗೆ ಬಂದಿದೆ.