ಹಲ್ದ್ವಾನಿ | ಕೇಂದ್ರ ಭಾಗದಲ್ಲಿ ಕರ್ಫ್ಯೂ ಮುಂದುವರಿಕೆ, ಹೊರವಲಯದಲ್ಲಿ ತೆರವು
Photo: PTI
ನೈನಿತಾಲ್: ಮದ್ರಸ ಮತ್ತು ಮಸೀದಿ ಧ್ವಂಸ ಕಾರ್ಯಾಚರಣೆಯ ಬಳಿಕ ಭುಗಿಲೆದ್ದ ಹಿಂಸಾಚಾರದ ವೇಳೆ ಪೊಲೀಸರ ಗೋಲಿಬಾರಿಗೆ ಕನಿಷ್ಠ ಆರು ಮಂದಿ ಬಲಿಯಾಗಿರುವ ಉತ್ತರಾಖಂಡದ ಹಲ್ದ್ವಾನಿ ಪಟ್ಟಣದ ಹೊರವಲಯಗಳಿಂದ ಕರ್ಫ್ಯೂವನ್ನು ಶನಿವಾರ ತೆರವುಗೊಳಿಸಲಾಗಿದೆ. ಆದರೆ, ಪ್ರತಿಭಟನೆ ಮತ್ತು ಹಿಂಸಾಚಾರ ನಡೆದ ಬಂಭೂಲ್ಪುರದಲ್ಲಿ ಕರ್ಫ್ಯೂ ಮುಂದುವರಿದಿದೆ.
ಪಟ್ಟಣದ ಹೊರವಲಯಗಳಲ್ಲಿರುವ ಅಂಗಡಿಗಳು ಶನಿವಾರ ತೆರೆದಿವೆ. ಆದರೆ ಶಾಲೆಗಳು ಮುಚ್ಚಿವೆ.
ಪೊಲೀಸರು 19 ಹೆಸರಿಸಿದ ಮತ್ತು ಸುಮರು 5,000 ಅಜ್ಞಾತ ವ್ಯಕ್ತಿಗಳ ವಿರುದ್ಧ ಮೊಕದ್ದೆ ದಾಖಲಿಸಿದ್ದಾರೆ ಮತ್ತು ಅವರನ್ನು ಬಂಧಿಸಲು ಆರಂಭಿಸಿದ್ದಾರೆ ಎಂದು ನೈನಿತಾಲ್ ಎಸ್ಎಸ್ಪಿ ಪಿ.ಎನ್. ಮೀನಾ ತಿಳಿಸಿದರು. ‘‘ಹಲವಾರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ದುಷ್ಕರ್ಮಿಗಳನ್ನು ಗುರುತಿಸಿ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’’ ಎಂದು ಮೀನಾ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
‘‘ಹಲ್ದ್ವಾನಿಯಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ಕರ್ಫ್ಯೂ ತೆರವುಗೊಳಿಸಲಾಗಿದೆ. ಬಂಭೂಲ್ಪುರದಲ್ಲಿ ಕರ್ಫ್ಯೂ ಮುಂದುವರಿದಿದೆ. ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಐವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಐವರು ಮೃತಪಟ್ಟಿದ್ದಾರೆ ಮತ್ತು ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ’’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎ.ಪಿ. ಅಂಶುಮಾನ್ ಹೇಳಿದ್ದಾರೆ.
ಗಾಳಿ ಸುದ್ದಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುವುದನ್ನು ತಡೆಯಲು ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಕರ್ಫ್ಯೂ ಈಗಲೂ ಚಾಲ್ತಿಯಲ್ಲಿರುವ ಬಂಭೂಲ್ಪುರ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ನಿಗದಿತ ಸಮಯಗಳಲ್ಲಿ ಜನರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ನುಡಿದರು.
ಸ್ಥಳೀಯಾಡಳಿತವು ಅತಿಕ್ರಮಣ ತೆರವು ಕಾರ್ಯಾಚರಣೆಯೊಂದರಲ್ಲಿ, ಬುಧವಾರ ಮಸೀದಿ ಮತ್ತು ಮದ್ರಸಗಳನ್ನು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿದ ಬಳಿಕ ಭುಗಿಲೆದ್ದ ಹಿಂಸಾಚಾರದ ವೇಳೆ ಪೊಲೀಸ್ ಗುಂಡಿಗೆ ಆರು ಪ್ರತಿಭಟನಾಕಾರರು ಬಲಿಯಾಗಿದ್ದಾರೆ.